ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್: ಮಾ.17ಕ್ಕೆ ಉಡುಪಿಯಲ್ಲಿ “ಅಪ್ರೆಂಟಿಶಿಪ್ ಮೇಳ, ಉದ್ಯೋಗ ಮೇಳ”

ಉಡುಪಿ: ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ ಅಂಗಸಂಸ್ಥೆ ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗಿಯ ಕಚೇರಿ ಸಹಯೋಗದಲ್ಲಿ ಮಾ. 17ರಂದು ನಗರದ ಅಮೃತ್ ಗಾರ್ಡನ್ ನಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಗೌರವಾಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದರು.

ಬನ್ನಂಜೆ ಶ್ರೀ ನಾರಾಯಣಗುರು ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆ 9ಕ್ಕೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ಉದ್ಯೋಗ ಮತ್ತು ಅಪ್ರೆಂಟಿಶಿಪ್ ಮೇಳ ನಡೆಯಲಿದೆ. ಎರಡು ಪ್ರತ್ಯೇಕ ನೋಂದಣಿ ಇರಲಿದೆ. ಸುಮಾರು 80ರಿಂದ 100 ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ. 1,500ರಿಂದ 2,000 ಮಂದಿ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲಿಯೇ ಉದ್ಯೋಗ ನೇಮಕಾತಿ ಪತ್ರ ವಿತರಣೆ ವ್ಯವಸ್ಥೆ ಮಾಡಲು ಕೆಲವು ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ತಿಳಿಸಿದರು.

ಇಲಾಖೆಯ ಅಧಿಕಾರಿಗಳು ಆಗಮಿಸಿ ಇದರ ವ್ಯವಸ್ಥೆ ಪರಿಶೀಲನೆ ಮಾಡಲಿದ್ದಾರೆ. ಅಪ್ರೆಂಟಿಶಿಪ್ ಗೆ ಆಯ್ಕೆಯಾದ ಅಭ್ಯರ್ಥಿಗೆ ಉತ್ತಮ ಗೌರವಧನ ಇರುತ್ತದೆ. ಕೇಂದ್ರ ಸರಕಾರದಿಂದ ಪ್ರತಿ ಅಭ್ಯರ್ಥಿಗೆ ನಿರ್ದಿಷ್ಟ ಅನುದಾನವನ್ನು ನೇರವಾಗಿ ಸಂಸ್ಥೆಗೆ ನೀಡಲಾಗುತ್ತದೆ. ಒಮ್ಮೆ ಸಂಸ್ಥೆಯ ಒಳಗೆ ಹೋದ ಅಭ್ಯರ್ಥಿ ಅಲ್ಲಿಯೇ ಶಾಶ್ವತ ಉದ್ಯೋಗ ಪಡೆಯುವ ಅವಕಾಶವೂ ಹೆಚ್ಚಿರುತ್ತದೆ ಎಂದರು.

ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಹೊರದೇಶಗಳಲ್ಲಿ ಉದ್ಯೋಗಕ್ಕೆ ಪ್ರಮಾಣಪತ್ರ ಜತೆಗೆ ಕೌಶಲತೆ ಕೇಳುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಸಹಕಾರಿಯಾಗಲಿದೆ. ಅಪ್ರೆಂಟಿಶಿಪ್ ಮಾಡಿದವರಿಗೆ ಒಂದು ವರ್ಷ ತರಬೇತಿ ಜತೆಗೆ ಸ್ಟೈಫಂಡ್ ಸಿಗುತ್ತದೆ. ಈ ಮೇಳವು ಯುವ ಜನತೆಗೆ ಹೆಚ್ಚು ಅನುಕೂಲವಾಗಲಿದೆ. ಈ ಬಾರಿ 2,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಮಹೇಶ್ ಠಾಕೂರ್, ಪ್ರಮುಖರಾದ ರಮೇಶ್ ಕಾಂಚನ್, ರಘುನಾಥ ಮಾಬೆನ್, ಭಾಸ್ಕರ ಸುವರ್ಣ, ಸುಧಾಕರ ಅಮೀನ್, ರೂಪೇಶ್ ಕುಮಾರ್, ಓಬು ಪೂಜಾರಿ, ಗಣನಾಥ ಎಕ್ಕಾರ್ ಪ್ರವೀಣ್ ಎಂ. ಪೂಜಾರಿ ಇದ್ದರು.