ಸಿದ್ಧಾಪುರ ಏತ ನೀರಾವರಿ ವಿಚಾರದಲ್ಲಿ ಬಿಜೆಪಿ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದೆ – ಗೋಪಾಲ ಪೂಜಾರಿ

ಉಡುಪಿ: ವಾರಾಹಿ ನದಿಯನ್ನು ಅವಲಂಬಿಸಿರುವ ರೈತರ ಹಕ್ಕುಗಳಿಗೆ ಆದ್ಯತೆ ನೀಡಬೇಕು. ವಾರಾಹಿ ಮೂಲ ಯೋಜನೆಯಂತೆ ನೀರಿನ ಹಂಚಿಕೆಯನ್ನು ಖಚಿತಪಡಿಸಬೇಕು ಎನ್ನುವ ಬೇಡಿಕೆ ಸೇರಿದಂತೆ ಒಟ್ಟು ಏಳು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕಂಡ್ಲೂರಿನಿಂದ ಸಿದ್ಧಾಪುರದವರೆಗೆ ಎರಡು ದಿನಗಳ ಕಾಲ ‘ನೀರಿಗಾಗಿ ನಮ್ಮ ನಡಿಗೆ’ ಪಾದಯಾತ್ರೆ ನಡೆಯಿತು.

ಕಳೆದ ಸುಮಾರು ನಾಲ್ಕು ದಶಕಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವ ವಾರಾಹಿ ನೀರಾವರಿ ಯೋಜನೆಯಲ್ಲಿ ವಾರಾಹಿ ಬಲದಂಡೆ ಯೋಜನೆ ಸೇರಿದಂತೆ ವಾರಾಹಿಗೆ ಸಂಬಂಧಿಸಿದ ವಿವಿಧ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಪಾದಯಾತ್ರೆಯ ಕೊನೆಯಲ್ಲಿ ಈ ಹಕ್ಕೊತ್ತಾಯ ಮಾಡಲಾಯಿತು.

ಸಿದ್ದಾಪುರದಲ್ಲಿ ಆಯೋಜಿಸಿದ ವಾರಾಹಿ ಉಳಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು, ಸಿದ್ಧಾಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ 2023ರಲ್ಲಿ ತಾನು ಮುಖ್ಯಮಂತ್ರಿಗೆ ನೀಡಿದ್ದ ಪತ್ರವನ್ನು ತಪ್ಪಾಗಿ ಬಿಂಬಿಸಿ ಬಿಜೆಪಿ ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ದೂರಿದರು.

ಏತ ನೀರಾವರಿ ಯೋಜನೆಯ ವಿರುದ್ದ ನಾನಿದ್ದೇನೆ ಎನ್ನುವುದನ್ನು ಸಾಬೀತು ಮಾಡಬೇಕು. ಇಲ್ಲವಾದಲ್ಲಿ ಒಂದು ತಿಂಗಳ ಒಳಗೆ ಸಾರ್ವಜನಿಕ ಕ್ಷಮೆ ಕೇಳುವಂತೆ ನಾನು ಬಹಿರಂಗವಾಗಿ ಆಗ್ರಹಿಸಿದ್ದೆ. ಆದರೆ ಇಲ್ಲಿಯವರೆಗೂ ಮೌನವಾಗಿರುವ ಬಿಜೆಪಿ ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ರೈತರ ಪರವಾಗಿರುವ ಕಾಂಗ್ರೆಸ್‌ನ್ನು ಒಡೆಯುವ ಪ್ರಯತ್ನ ಮಾಡಬೇಡಿ. ಶಾಸಕನಾಗಿದ್ದಾಗ ಜಾತಿ ತಾರತಮ್ಯ ಮಾಡಿಲ್ಲ. ಎಲ್ಲಾ ಸಮುದಾಯವರಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದೆ. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಜಿ. ಶಂಕರ್ ಅವರ ಋಣ ನಮ್ಮ ಮೇಲಿದೆ. ನಾನು ಕೊಟ್ಟಿರುವ ಪತ್ರದಲ್ಲಿರುವ ಅಂಶಗಳಿಗೆ ಪೂರಕವಾದ ತೀರ್ಮಾನಗಳು ಬಂದಲ್ಲಿ ನಿಮ್ಮ ನಿಲುವು ಏನು ಎನ್ನುವುದನ್ನು ಶಾಸಕ ಗಂಟಿಹೊಳೆ ಸ್ಪಷ್ಟಪಡಿಸಬೇಕು ಎಂದು ಗೋಪಾಲ ಪೂಜಾರಿ ಪ್ರಶ್ನಿಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಮಾತನಾಡಿದರು.

ಜಿಲ್ಲಾಧಿಕಾರಿಯಿಂದ ಮನವಿ ಸ್ವೀಕಾರ:
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ಬೇಡಿಕೆಯ ಅಹವಾಲು ಸ್ವೀಕರಿಸಿ, ರೈತರ ಹಾಗೂ ಸ್ಥಳೀಯರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ವ್ಯಕ್ತಪಡಿಸಿದರು.

ಪ್ರಮುಖರಾದ ಅಶೋಕ್ ಪೂಜಾರಿ ಬೀಜಾಡಿ, ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಸೂರಜ್ ಜಿ. ಪೂಜಾರಿ, ಅರವಿಂದ ಪೂಜಾರಿ ಪಡುಕೋಣೆ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ವಂಡಬಳ್ಳಿ ಜಯರಾಮ್ ಶೆಟ್ಟಿ, ಅನಂತ ಮೊವಾಡಿ, ವಾಸುದೇವ ಪೈ ಸಿದ್ದಾಪುರ, ಹರೀಶ್ ತೋಳಾರ್ ಕೊಲ್ಲೂರು, ಭರತ್ ದೇವಾಡಿಗ, ಶೇಖರ ಪೂಜಾರಿ, ರಘುರಾಮ್ ಶೆಟ್ಟಿ ಬಿಜೂರು, ಗಣಪತಿ ಟಿ ಶ್ರೀಯಾನ್, ಸುಧೀಶ್ ಗುಲ್ವಾಡಿ, ಉದಯ ಪೂಜಾರಿ ಚಿತ್ತೂರು, ಹನೀಫ್ ಗುಲ್ವಾಡಿ, ಅಫ್ಝಲ್ ಹೈಕಾಡಿ, ಮುಸ್ತಾಕ್ ಕಂಡ್ಲೂರು, ಕಾನಿಷ್ಕ ಕೆ ಹೆಗ್ಡೆ ಬೈಲೂರು, ಅಕ್ಷಯ್ ಶೆಟ್ಟಿ, ಅನೀಶ್ ಪೂಜಾರಿ ಬೈಂದೂರು, ಪ್ರಶಾಂತ ಪೂಜಾರಿ ಕರ್ಕಿ, ಮೋಹನ್ ಪೂಜಾರಿ ಉಪ್ಪುಂದ, ಹರಿಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.