ಉಡುಪಿ:ಪೂರ್ಣಪ್ರಜ್ಞಾ ವ್ಯವಸ್ಥಾಪನಾ ಸಂಸ್ಥೆಯಲ್ಲಿ ಮ್ಯಾಕ್ವೇರ್ ನವೋತ್ಪತ್ತಿ ಕೇಂದ್ರ ಉದ್ಘಾಟನೆ


ಉಡುಪಿ: ಉಡುಪಿ ನಗರದ ಪೂರ್ಣಪ್ರಜ್ಞಾ ವ್ಯವಸ್ಥಾಪನಾ ಸಂಸ್ಥೆ (ಪಿ.ಐ.ಎಂ.)ಯಲ್ಲಿ, ಪೂರ್ಣಪ್ರಜ್ಞಾ ಇಂಕ್ಯುಬೇಶನ್ ಕೇಂದ್ರದ ಅಡಿಯಲ್ಲಿ, ಬೆಂಗಳೂರು ಮೂಲದ ಮ್ಯಾಕ್ವೇರ್ ಟೆಕ್ನಾಲಜೀಸ್ ಎಲ್ಎಲ್ಪಿ ಸಂಸ್ಥೆಯ ಸಹಯೋಗದಲ್ಲಿ ಮ್ಯಾಕ್ವೇರ್ ನವೋತ್ಪತ್ತಿ ಕೇಂದ್ರವನ್ನು ಶುಕ್ರವಾರ ಪ್ರಜ್ಞಾ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು.

ಉಡುಪಿ ಶ್ರೀ ಆದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮ ನೆರವೇರಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮ್ಯಾಕ್ವೇರ್ ಟೆಕ್ನಾಲಜೀಸ್ ಎಲ್ಎಲ್ಪಿ, ಬೆಂಗಳೂರು ಸಂಸ್ಥೆಯ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಭಾರದ್ವಾಜ್ ಎಸ್. ಅವರು ನವೋತ್ಪತ್ತಿ ಕೇಂದ್ರವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ನವೀನ ಹಾಗೂ ಉದ್ಯಮೋನ್ಮುಖ ಪರಿಹಾರಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಪೂರ್ಣಪ್ರಜ್ಞಾ ವ್ಯವಸ್ಥಾಪನಾ ಸಂಸ್ಥೆಯ ನಿರ್ದೇಶಕರಾದ ಡಾ. ಪಿ. ಎಸ್. ಐತಾಳ್ ಅವರು ಮಾತನಾಡಿ, ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳ ಸಹಭಾಗಿತ್ವದ ಅಗತ್ಯತೆಯನ್ನು ಒತ್ತಿ ಹೇಳಿದರು ಹಾಗೂ ಈ ನವೋತ್ಪತ್ತಿ ಕೇಂದ್ರವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ, ಮಾರ್ಗದರ್ಶನ ಮತ್ತು ಉದ್ಯಮಾರಂಭದ ಅವಕಾಶಗಳನ್ನು ಒದಗಿಸಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಖಜಾಂಚಿಯಾದ ಸಿ.ಎ. ಪ್ರಶಾಂತ್ ಹೊಳ್ಳ ವಹಿಸಿದ್ದರು.ಪ್ರೊ.ಸಂತೋಷ್ ಎನ್. ಪ್ರಭು ಅವರು ಸ್ವಾಗತ ಭಾಷಣ ಮಾಡಿ, ಸಂಸ್ಥೆಯ ನವೀನತೆ ಮತ್ತು ಉದ್ಯಮಶೀಲತೆಯ ಅಭಿವೃದ್ಧಿಯತ್ತ ಇರುವ ಬದ್ಧತೆಯನ್ನು ವಿವರಿಸಿದರು.

ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಎಂ.ಬಿ.ಎ ವಿದ್ಯಾರ್ಥಿನಿ ನೀಕ್ಷಾ ಅವರು ನಿರೂಪಿಸಿದರು. ಕಾವ್ಯಾ ಥಾಂಡೇಲ್ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಆಹ್ವಾನಿತರು ಉಪಸ್ಥಿತರಿದ್ದರು.