ಬೆಂಗಳೂರು: ಇನ್ಮುಂದೆ ಪಾರ್ಸ್ ಪೋರ್ಟ್ ವೆರಿಫಿಕೇಶನ್ ಗೆ ಹೊಸ ನಿಯಮ.!

ಬೆಂಗಳೂರು: ಡಿಜಿ & ಐಜಿಪಿ ಸೂಚನೆಯಂತೆ ಸಿಲಿಕಾನ್ ಸಿಟಿಯಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್‌’ಗೆ ಹೊಸ ನಿಯಮ ಜಾರಿಗೆ ತರಲಾಗಿದೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೊಸ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡಿದ್ದು, ಪಾಸ್‌ಪೋರ್ಟ್ ಪರಿಶೀಲನೆಗೆ ವೇಳೆ ಬಾಡಿ ವೋರ್ನ್‌ ಕ್ಯಾಮೆರಾ ಕಡ್ಡಾಯವಾಗಿರಬೇಕು. ಪಾಸ್‌ಪೋರ್ಟ್ ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಸಬಾರದು. ಬದಲಿಗೆ ಅಧಿಕಾರಿಗಳು ಅರ್ಜಿದಾರರು ನೀಡಿರುವ ವಿಳಾಸಕ್ಕೆ ಕಡ್ಡಾಯವಾಗಿ ಭೇಟಿ ನೀಡಿ, ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಬೇಕು. ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಎಸ್‌ಎಂಎಸ್ ಅಥವಾ ಕರೆ ಮಾಡುವ ಮೂಲಕ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

ಅರ್ಜಿದಾರರಿಂದ ಯಾವುದೇ ರೀತಿಯ ಆಮಿಷ ಅಥವಾ ಲಂಚವನ್ನು ನಿರೀಕ್ಷಿಸಬಾರದು. ಜೊತೆಗೆ ಲಂಚದ ಉದ್ದೇಶದಿಂದ ಅರ್ಜಿದಾರರಿಗೆ ಕಿರುಕುಳ ನೀಡಬಾರದು. ಅರ್ಜಿದಾರರನ್ನು ವಿನಾಕಾರಣ ಅಲೆದಾಡಿಸುವುದು ಅಥವಾ ವರದಿ ನೀಡಲು ವಿಳಂಬ ಮಾಡಬಾರದು. ಪ್ರತಿಕೂಲ ವರದಿ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತ ಮತ್ತು ಸ್ಪಷ್ಟವಾದ ಪುರಾವೆಗಳನ್ನು ಹೊಂದಿರಬೇಕು. ಈ ಎಲ್ಲಾ ನಿಯಮಗಳು ಪಾಲನೆಯಾಗುತ್ತಿವೆಯೇ ಎಂದು ಡಿಸಿಪಿ ವಾರಕ್ಕೊಮ್ಮೆ ವರದಿ ಸಲ್ಲಿಸಬೇಕು ಎಂದಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಖಡಕ್ ಎಚ್ಚರಿಕೆ ನೀಡಿದ್ದಾರೆ.