ಉಡುಪಿ: ಬೆಂಗಳೂರು- ಮಾಡ್ಗಾಂವ್ ಮಾರ್ಗದಲ್ಲಿ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲು ಕೆಲ ಲಾಬಿ ನಡೆಯುತ್ತಿದೆ. ಮಂಗಳೂರಿನ ಸಿಟಿ ಒಳಗೆ ರೈಲು ಸಂಚಾರ ಮಾಡುವಂತೆ ಒತ್ತಡ ತರಲಾಗುತ್ತಿದ್ದು, ಇದರಿಂದ ರೈಲಿನ ಸಂಚಾರದಲ್ಲಿ ಬಹಳಷ್ಟು ವಿಳಂಬವಾಗಲಿದೆ. ದೂರದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆ ಆಗಲಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲತೆಯ ದೃಷ್ಟಿಯಿಂದ ಎಲ್ಲ ಮುಖ್ಯ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮಂಗಳೂರುನ ಪಡೀಲ್ ಮಾರ್ಗವಾಗಿ ಸಂಚರಿಸುವ ಈ ರೈಲು ಮಂಗಳೂರು ಫರಂಗಿಪೇಟೆ, ಜೋಕಟ್ಟೆ, ಸುರತ್ಕಲ್, ಉಡುಪಿ, ಕುಂದಾಪುರ, ಮಾರ್ಗವಾಗಿ ಅತೀ ಕಡಿಮೆ ಅವಧಿಯಲ್ಲಿ ಸಂಚರಿಸಲಿದೆ. ಆದರೆ ಅದನ್ನು ಮಂಗಳೂರು ಸಿಟಿ ಒಳ ಭಾಗಕ್ಕೆ ತಂದು ವೇಳಾ ಪಟ್ಟಿಯನ್ನು ಕೆಡಿಸಿ ವಿಳಂಬವಾಗಿ ಸಂಚರಿಸುವಂತೆ ಮಾಡುವ ಹುನ್ನಾರ ಕೆಲವು ಲಾಬಿಗಳಿಂದ ನಡೆಯುತ್ತಿದೆ ಎಂದು ಅವರು ದೂರಿದರು.
ಈಗಾಗಲೇ ಬೆಂಗಳೂರು ಮೈಸೂರು ಮುರುಡೇಶ್ವರ ರೈಲು ಸಿಟಿ ಒಳಭಾಗಕ್ಕೆ ಬಂದು ಹೊರ ಬರಲು ಕನಿಷ್ಠ 2 ತಾಸು ವಿಳಂಬವಾಗುತ್ತಿದ್ದು. ಈ ಪರಿಸ್ಥಿತಿ ನಮ್ಮ ವಂದೇ ಭಾರತ ಎಕ್ಸ್‌ಪ್ರೆಸ್ ಗೆ ಒದಗಿ ಬಾರದಂತೆ ರೈಲ್ವೆ ಸಚಿವ ಸೋಮಣ್ಣ ಗಮನಹರಿಸಬೇಕು. ಸುಮಾರು 700 ಕಿಲೋಮೀಟರ್ ಸಂಚರಿಸುವ ಈ ರೈಲು ಅನಗತ್ಯ ವಿಳಂಬಕ್ಕೆ ಅವಕಾಶ ಕೊಡಬಾರದು. ಮಂಗಳೂರು ನಿಲ್ದಾಣವನ್ನು ಕೇರಳ ದಕ್ಷಿಣ ರೈಲ್ವೆ ಕಪಿ ಮುಷ್ಟಿಯಿಂದ ಪಾರು ಮಾಡಿ ಹುಬ್ಬಳ್ಳಿ ನೈರುತ್ಯ ರೈಲ್ವೆಗೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ವಿವೇಕ್ ನಾಯಕ್, ಸಲಹೆಗಾರ ಅಭಿಜಿತ್ ಸಾರಂಗ ಇದ್ದರು.
















