ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೊಕ್ಸ್-ಎಫ್ಟಿ ಎಸ್ಸಿ-2 ) ನ್ಯಾಯಾಧೀಶ ಮಾನು ಕೆ.ಎಸ್. 20 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ನಗರದಲ್ಲಿ ಆಟೋ ಚಾಲಕನಾಗಿರುವ ಮೂಲತ: ಬಾಗಲಕೋಟೆಯ ನಾಗರಾಜ್ ಶಿವಪ್ಪದುರಗಣ್ಣವರ (21) ಶಿಕ್ಷೆಗೊಳಗಾದ ಆರೋಪಿ.ಈತ ತನ್ನ ತಾಯಿಯ ಪರಿಚಯದ ಮಹಿಳೆಯ ಪುತ್ರಿಯ ಜೊತೆಗೆ ಅನ್ನೋನ್ಯವಾಗಿದ್ದು, ಆಕೆಯ ಮನೆಗೂ ಆಗಾಗ್ಗೆ ಹೋಗುತ್ತಿದ್ದ ಎನ್ನಲಾಗಿದೆ.
2025ರ ಫೆ.25 ಮತ್ತು ಮಾ.13ರಂದು ಅತ್ತಾವರದಲ್ಲಿರುವ ತನ್ನ ಬಾಡಿಗೆ ಮನೆಗೆ ಬಾಲಕಿಯನ್ನು ಕರೆದುಕೊಂಡು ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಪರಿಣಾಮ ಆಕೆ ಗರ್ಭವತಿಯಾ ಗಿದ್ದಳು. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಪೊಕ್ಸೆ ಕಲಂ 6 ರಡಿ 20 ವರ್ಷ ಕಠಿಣ ಸಜೆ ಮತ್ತು 40,000 ರೂ ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಾದಾ ಸಜೆ ಮತ್ತು ಬಿಎನ್ಎಸ್ ಕಲಂ 69ರಡಿ 5 ವರ್ಷ ಸಾದಾ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಒಂದು ತಿಂಗಳ ಸಜೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.
ದಂಡದ ಮೊತ್ತ ಒಟ್ಟು 50,000 ರೂ. ಅಲ್ಲದೆ 6.50 ಲಕ್ಷ ರೂ.ಗಳನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಜಿಲ್ಲಾ ಕಾನುನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.ಮಹಿಳಾ ಠಾಣಾಧಿಕಾರಿ ಬಾಲಕೃಷ್ಣ ಎಚ್.ಎನ್. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಪೊಕ್ಕೊ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ವಾದಿಸಿದ್ದರು.
















