ಉಡುಪಿ: ಕರ್ತವ್ಯ ಲೋಪ ಎಸಗಿದ್ದಾರೆಂದು ಎಸ್‌ಐ, ಹೆಡ್‌ಕಾನ್‌ಸ್ಟೇಬಲ್‌ ಸಸ್ಪೆಂಡ್‌

ಉಡುಪಿ: ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ನ. 2ರಂದು ನಡೆದ ಅನ್ಯ ಕೋಮಿನ ಯುವಕನ ಮೇಲಿನ ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಉಡುಪಿ ನಗರ ಠಾಣಾ ಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಅವರನ್ನು ಎಸ್ಪಿ ನಿಶಾ ಜೇಮ್ಸ್‌
ಅಮಾನತುಗೊಳಿಸಿದ್ದಾರೆ.

ಉಡುಪಿ ನಗರ ಠಾಣೆಯ ಎಸ್‌ಐ ಅನಂತಪದ್ಮನಾಭ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಜೀವನ್‌ ಅಮಾನತುಗೊಂಡ ಪೊಲೀಸ್. ನ. 2ರಂದು ರಾತ್ರಿ 8ಗಂಟೆ ಸುಮಾರಿಗೆ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಸ್ನೇಹಿತರಾದ ಆಶೀಶ್‌, ಶಾನು, ತಾಹಿಮ್‌ ಮತ್ತು ಶಿವಾನಿ ಎಂಬವರು ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಂತಹ ಸುನೀಲ್‌ ಪೂಜಾರಿ, ರಾಕೇಶ್‌ ಸುವರ್ಣ ಮತ್ತು ಇತರರ ತಂಡವು ಈ ನಾಲ್ವರ ಮೇಲೆ ಏಕಾಏಕಿಯಾಗಿ ದೈಹಿಕ ಹಲ್ಲೆ ನಡೆಸಿತ್ತು ಎನ್ನಲಾಗಿದೆ.
ಈ ಪ್ರಕರಣದ ಕುರಿತು ನ. 5ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಕೃಷ್ಣಾನಂದ ಎಂಬವರು ಈ ಕುರಿತು ಪ್ರತಿ ದೂರು ನೀಡಿದ್ದರು. ಆದರೆ ಈ ಪ್ರಕರಣದಲ್ಲಿ ಉಡುಪಿ ನಗರ ಠಾಣಾ ಎಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೇಬಲ್ ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಅವರನ್ನು ಎಸ್ಪಿ ಅಮಾನತುಗೊಳಿಸಿದ್ದಾರೆ.