ಉಡುಪಿ: ಇಂದಿನ ಯುವಪೀಳಿಗೆ ಸನ್ಮಾರ್ಗ ದಾರಿಯಲ್ಲಿ ಸಾಗಲು ಸರ್ವಜ್ಞರ ತ್ರಿಪದಿಗಳು ಸಹಕಾರಿ : ಎಂ. ಎ ಗಫೂರ್

ಉಡುಪಿ: ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆ ಮತ್ತು ಪದಗಳಲ್ಲಿ ತ್ರಿಪದಿಗಳನ್ನು ಹೇಳುವ ಮೂಲಕ ಸಾಮಾಜಿಕ
ಅಂಧಕಾರವನ್ನು ಹೋಗಲಾಡಿಸಿ ಸಮಾಜವನ್ನು ತಿದ್ದುವಲ್ಲಿ ಶ್ರಮಿಸಿದ ಸರ್ವಜ್ಞರು ಇಂದಿನ ಪೀಳಿಗೆಯ ಉತ್ತಮ ಜೀವನ ನಿರ್ವಹಣೆಗಾಗಿ ಸನ್ಮಾರ್ಗದ ದಾರಿಯನ್ನು ರೂಪಿಸಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ ಗಫೂರ್ ಹೇಳಿದರು.

ಅವರು ಶುಕ್ರವಾರ ಹಿರಿಯಡ್ಕದ ಡಾ. ಚಂದಯ್ಯ ಹೆಗ್ಡೆ ಸಭಾಭವನ ಇಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟ, ಇವರ ಸಹಯೋಗದಲ್ಲಿ ನಡೆದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕವಿ ಸರ್ವಜ್ಞರವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮಾತನಾಡಿದರು.

16ನೇ ಶತಮಾನದ ಪ್ರಸಿದ್ಧ ಕನ್ನಡ ತ್ರಿಪದಿ ಕವಿಯಾದ ಸರ್ವಜ್ಞನು, ಸಾಮಾಜಿಕ ಸಮಾನತೆ, ನೀತಿ ಮತ್ತು ಜ್ಞಾನವನ್ನು ಸರಳ ತ್ರಿಪದಿಗಳ ಮೂಲಕ ಬೋಧಿಸಿದ್ದಾರೆ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಜನ ಸಾಮಾನ್ಯರಲ್ಲಿ ನೀತಿ ಪಾಠಗಳನ್ನು ಬಿತ್ತಲು ಇಂದಿಗೂ ಪ್ರಸ್ತುತವಾಗಿದೆ ಎಂದರು.

ನಾಡು ಕಂಡ ಮಹಾ ಕವಿ ಸರ್ವಜ್ಞರು ತನ್ನ ಜೀವನ ಅನುಭವದ ಮೂಲಕ ವಚನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿ ಇದ್ದಂತಹ ಅಂಕುಡೊಂಕುಗಳನ್ನು ತಿದ್ದುವ ಕುರಿತು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತ್ರಿಪದಿಗಳ ಮೂಲಕ ವಚನಗಳನ್ನು ರಚಿಸಿದ್ದಾರೆ ಎಂದರು.

ಅಪಾರ ಜ್ಞಾನವನ್ನು ಹೊಂದಿದ್ದ ಸರ್ವಜ್ಞರು ಕಾಲ್ನಡಿಗೆಯ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವ ಸುಲಭ ಭಾಷೆ ಮತ್ತು ಪದಗಳ ವಚನ ಹೇಳುವ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದ್ದರು . ನಿಂತಲ್ಲೆ ವಚನ ಸಷ್ಠಿಸುವ ಕಲೆಯನ್ನು ಹೊಂದಿದ್ದ ಇವರ ವಚನಗಳನ್ನು ಚಿಕ್ಕಮಕ್ಕಳು ಸಹ ಅರ್ಥ ಮಾಡಿಕೊಳ್ಳಬಹುದು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ ಕುಲಾಲ್, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸರ್ವಜ್ಞರು ವಚನಗಳನ್ನು ಬರೆಯದ ಕ್ಷೇತ್ರಗಳಿಲ್ಲ. ಸರ್ವಜ್ಞರ ತ್ರಿಪದಿಗಳಲ್ಲಿನ ಸಾರಗಳಿಂದ ಪರಿಣಾಮಕಾರಿ ವ್ಯಕ್ತಿತ್ವ ಹೊಂದಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಕವಿ ಸರ್ವಜ್ಞರ ಆದರ್ಶ, ತತ್ವ, ವಿಚಾರಧಾರೆಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಜೆಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕವಿ ಸರ್ವಜ್ಞರ ಕುರಿತು ರಸ ಪ್ರಶ್ನೆಯನ್ನು ನಡೆಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸಂತೋಷ್ ಕುಲಾಲ್, ಕುಲಾಲ ಸಂಘ(ರಿ) ಪೆರ್ಡೂರು ಇದರ ಅಧ್ಯಕ್ಷ ಕಾಳು ಕುಲಾಲ, ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವೀಣಾ, ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು, ಉಡುಪಿ ಜಿಲ್ಲಾ ಕುಲಾಲ ಸಂಘ ಒಕ್ಕೂಟದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿ, ಶಾಲೆಯ ಹಿಂದಿ ಶಿಕ್ಷಕ ರವೀಂದ್ರ ಪ್ರಭು ವಂದಿಸಿದರು.