ಉಡುಪಿ: ನಗರ ಕುಟುಂಬ ಕಲ್ಯಾಣ ಕೇಂದ್ರ ಸ್ಥಗಿತ; ಪುನರಾರಂಭಿಸಲು ಆಗ್ರಹ

ಉಡುಪಿ: ಕುಕ್ಕಿಕಟ್ಟೆ ಡಯಾನ ಚಿತ್ರಮಂದಿರದ ಎದುರು ಸುಮಾರು ಇಪ್ಪತ್ತು ವರ್ಷಗಳಿಂದ ಸೇವಾ ನಿರತವಾಗಿದ್ದ ನಗರ ಕುಟುಂಬ ಕಲ್ಯಾಣ ಕೇಂದ್ರವು ಸೇವೆಯನ್ನು ಸ್ಥಗಿತಗೊಳಿಸಿದ್ದು, ಬಾಗಿಲಿಗೆ ಬೀಗ ಜಡಿಯಲಾಗಿದೆ. ಇದರಿಂದ ಪರಿಸರದ ಸುತ್ತಮುತ್ತಲಿನ ನಾಗರಿಕರು ಚಿಕಿತ್ಸೆ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಶಿಶುಗಳಿಗೆ ಲಸಿಕೆ, ಚುಚ್ಚುಮದ್ದು ಹಾಗೂ ಗರ್ಭಿಣಿಯರಿಗೆ ತಪಾಸಣೆ, ಅಗತ್ಯ ಚಿಕಿತ್ಸೆಗಳು ಕ್ಲಪ್ತ ಸಮಯದಲ್ಲಿ ದೊರೆಯುತಿತ್ತು. ಅಲ್ಲದೆ ಜ್ವರಬಾಧೆ, ಶೀತ, ಕೆಮ್ಮು‌ ಮೊದಲಾದ ವ್ಯಾಧಿಗಳಿಂದ ಬಳಲುವ ರೋಗಿಗಳು ಚಿಕಿತ್ಸೆ ಪಡೆಯಲು ಅವಕಾಶವಿತ್ತು. ಕೇಂದ್ರ ಸ್ಥಗಿತಗೊಂಡಿರುವುದರಿಂದ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಬಡ ಕುಟುಂಬಗಳ ಶಿಶುಗಳಿಗೆ, ಗರ್ಭಿಣಿಯರಿಗೆ, ರೋಗಿಗಳಿಗೆ ಎದುರಾಗಿದೆ.

ಸರಕಾರದ ಉಚಿತ ಚಿಕಿತ್ಸಾ ಸೇವೆಯನ್ನು ಪಡೆಯಲು, ನಾಗರಿಕ ಸಮಾಜವು ವಂಚಿತವಾಗದಂತೆ ತಡೆಯಬೇಕಾಗಿದ್ದು ಆಡಳಿತ ವ್ಯವಸ್ಥೆಗಳ ಕರ್ತವ್ಯವಾಗಿದೆ. ತಕ್ಷಣ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯು, ಕರ್ತವ್ಯ ನಿಲ್ಲಿಸಿರುವ ಕುಕ್ಕಿಕಟ್ಟೆಯ ನಗರ ಕುಟುಂಬ ಕಲ್ಯಾಣ ಕೇಂದ್ರವನ್ನು ಪುನಾರಂಭಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.