ಅಯೋಧ್ಯೆ ರಾಮ ಮಂದಿರ ನಿರ್ಮಾಣ: ಸುಪ್ರೀಂ ತೀರ್ಪಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸ್ವಾಗತ

ಉಡುಪಿ: ಬಹು ದಶಕಗಳ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ವಿವಾದವು ಸುಪ್ರೀಂ ಕೋರ್ಟ್ ತೀರ್ಪಿನಿಂದ ತೆರೆ ಕಂಡಂತಾಗಿದೆ. ದೇಶದ ಸಂವಿಧಾನದ ಮೇಲೆ ಭರವಸೆ ಇರುವ ಕಾಂಗ್ರೆಸ್‌ ಪಕ್ಷ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಕೇಂದ್ರ ಸರಕಾರವೇ ೩ ತಿಂಗಳ ಒಳಗೆ ಮಂದಿರ ನಿರ್ಮಾಣಕ್ಕೆ ಟ್ರಸ್ಟನ್ನು ರಚಿಸಿ ಕ್ರಮ ಕೈಗೊಳ್ಳಬೇಕು. ಮುಸ್ಲೀಮರಿಗೂ ೫ ಎಕರೆ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಪ್ರಕಟಿಸಿರುವ ಐತಿಹಾಸಿಕ ತೀರ್ಪು ಹಿಂದೂ ಮುಸಲ್ಮಾನರಲ್ಲಿ ಭಾಂಧವ್ಯ ಬೆಸೆಯಲು ಸಹಕಾರಿಯಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಪ್ರಜೆಗಳಾದ ಹಿಂದೂ-ಮುಸಲ್ಮಾನರ ನಡುವಿನ ಶಾಂತಿ ಸೌಹಾರ್ದತೆಗಳನ್ನು ನಾವು ಕಾಪಾಡಬೇಕಾಗಿದೆ. ಎರಡು ಧರ್ಮಗಳ ನಡುವಿನ ಸೌಹಾರ್ಧತೆಗೆ ಭಂಗ ಬಂದು ಪ್ರತಿನಿತ್ಯವೆಂಬಂತೆ ಗಲಭೆ ಹಾಗೂ ಜನರ ಸಾವಿಗೆ ಕಾರಣವಾದ ಅಯೋಧ್ಯೆ ವಿವಾದ ಕೊನೆಗೊಳ್ಳುತ್ತಿರುವುದು ಅಖಂಡ ಭಾರತ ದೇಶದ ಅಭಿವೃದ್ಧಿಗೆ ಪೂರಕವಾಗುವುದರೊಂದಿಗೆ ಸುಪ್ರೀಂ ಕೋರ್ಟಿನ ಈ ತೀರ್ಪು ಸರ್ವ ಧರ್ಮಕ್ಕೂ ಸಂದ ಗೆಲುವಾಗಿದೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.