ಬೆಳಗಾವಿಯಲ್ಲಿ ಸೌಹಾರ್ದಯುತ ಭಾವೈಕ್ಯದ ಮದುವೆ: ಹಿಂದೂ ಹುಡುಗನಿಗೆ ನೆರಳಾದ ಮುಸ್ಲಿಂ ದಂಪತಿ

ಹುಕ್ಕೇರಿ (ಬೆಳಗಾವಿ): ತಾಲ್ಲೂಕಿನ ಬಸ್ತವಾಡ ಗ್ರಾಮದ ಮುಸ್ಲಿಂ ದಂಪತಿಯು ಹಿಂದೂ ಧರ್ಮದ ಇಬ್ಬರು ಅನಾಥ ಮಕ್ಕಳನ್ನು ಸಾಕಿ ಬೆಳೆಸಿ, ಶಿಕ್ಷಣ ಕೊಡಿಸಿ, ಈಗ ಒಬ್ಬರ ಮದುವೆಯನ್ನೂ ಮಾಡಿದ್ದಾರೆ. ಗ್ರಾಮದ ಕಾಡಸಿದ್ದೇಶ್ವರ ಸಭಾಭವನದಲ್ಲಿ ಭಾನುವಾರ ಹಾಕಿದ್ದ ಮದುವೆ ಮಂಟಪದಲ್ಲಿ ವಧು–ವರರಷ್ಟೇ ಹಿಂದೂಗಳು. ಮದುವೆ ಜವಾಬ್ದಾರಿ, ಖರ್ಚು– ವೆಚ್ಚ, ಓಡಾಟ ಎಲ್ಲವೂ ಮುಸ್ಲಿಮರದ್ದು.

ಗ್ರಾಮದ ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ಹಾಗೂ ನೂರಜಾನ್ ದಂಪತಿಯೇ ಭಾವೈಕ್ಯ ಮೆರೆದವರು. ದಂಪತಿಯ ನಿರ್ಧಾರಕ್ಕೆ ಅವರ ಇಡೀ ಕುಟುಂಬದವರು ಬೆಂಬಲವಾಗಿ ನಿಂತರು.

ಇಡೀ ಬದುಕು ತ್ಯಾಗ:

ಹಿಂದೂ– ಲಿಂಗಾಯತ ಸಮಾಜದ ಶಿವಾನಂದ ಕಾಡಯ್ಯ ಪೂಜಾರ ದಂಪತಿಗೆ ಇಬ್ಬರು ಪುತ್ರರಿದ್ದರು. ಹಿರಿಯ ಪುತ್ರ ಸೋಮಶೇಖರಗೆ 4 ವರ್ಷ, ಕಿರಿಯ ಪುತ್ರ ವಸಂತಗೆ 2 ವರ್ಷ ಇದ್ದಾಗ ಪೂಜಾರ ದಂಪತಿ ನಿಧನರಾದರು.

ಅನಾಥರಾದ ಮಕ್ಕಳನ್ನು ನಾಯಿಕವಾಡಿ ದಂಪತಿ ಮಡಿಲಿಗೆ ಹಾಕಿಕೊಂಡರು. ಇಬ್ಬರನ್ನೂ ಸಾಕಿ, ಸಲುಹಿ, ಉತ್ತಮ ಶಿಕ್ಷಣ ಕೊಡಿಸಿದರು. ನಾಯಿಕವಾಡಿ ದಂಪತಿಗೂ ನಾಲ್ವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಏಳು ಮಕ್ಕಳನ್ನು ದಂಪತಿ ಒಂದೇ ಮನೆಯಲ್ಲಿಟ್ಟುಕೊಂಡು ಸಲಹಿದ್ದಾರೆ.

ಮೆಹಬೂಬ್ ಹಸನ್ ನಾಯಿಕವಾಡಿ ಅವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಶಿವಾನಂದ ಕಾಡಯ್ಯ ಪೂಜಾರ ಕೂಡ ಖಾಸಗಿ ಬಸ್‌ ಚಾಲಕರಾಗಿದ್ದರು.

ಪದವಿ ಶಿಕ್ಷಣ ಪಡೆದಿರುವ ಸೋಮಶೇಖರ್ ಮತ್ತು ಪಿಯು ಶಿಕ್ಷಣ ಮುಗಿಸಿದ ವಸಂತ ಇಬ್ಬರೂ ವಿಶೇಷ ಆರ್ಥಿಕ ವಲಯದ (ಎಸ್.ಇ.ಝಡ್) ಏಕಸ್ ಕಂಪನಿಯ ಉದ್ಯೋಗಿಗಳು.

ಈಗ ಸೋಮಶೇಖರ್‌ಗೆ ಕನ್ಯೆ ನೋಡಿದ್ದಿ. ಗ್ರಾಮದಲ್ಲಿ ಹಿಂದೂ –ಲಿಂಗಾಯತ ಸಂಪ್ರದಾಯದಂತೆಯೇ ಮದುವೆ ಮಾಡಿದ್ದಾರೆ. ಕರುಳಕುಡಿಯಂತೆ ಸಾಕಿ ಬೆಳೆಸಿದ ಮಗನ ಮದುವೆ ಕಂಡು ನಾಯಿಕವಾಡಿ ದಂಪತಿ ಭಾವುಕರಾದರು. ಕುಟುಂಬದವರು ಹಾಗೂ ಊರಿನ ಹಿರಿಯರು ಇದಕ್ಕೆ ಸಾಕ್ಷಿಯಾದರು.