ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಉಡುಪಿಯ ಉದ್ಯಾವರದ ವ್ಯಕ್ತಿಯೊಬ್ಬರು 20 ಮಿಲಿಯನ್ ದಿರ್ಹಮ್ (ಸುಮಾರು 45 ಕೋಟಿ ರೂಪಾಯಿಗೂ ಅಧಿಕ) ಮೊತ್ತದ ಬೃಹತ್ ಬಹುಮಾನವನ್ನು ಗೆದ್ದಿರುವುದಾಗಿ ವರದಿಯಾಗಿದೆ.
ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಅನಿವಾಸಿ ಭಾರತೀಯ ಶಂತನು ಶೆಟ್ಟಿಗಾರ್ ಈ ಲಾಟರಿ ಗೆದ್ದಿದ್ದಾರೆ. ಪ್ರಸ್ತುತ ಓಮನ್‌ನ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿರುವ ಇವರು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ‘ಸರಣಿ 283’ರ ಈ ಬೃಹತ್ ಮೊತ್ತ ಒಲಿದಿದೆ. ಇದು ಯುಎಇಯ ದೀರ್ಘಕಾಲದ ರಾಫೆಲ್ ಡ್ರಾಗಳಲ್ಲಿ ಒಂದಾದ ಬಿಗ್ ಟಿಕೆಟ್ ಇತಿಹಾಸದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.
ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಈ ಲೈವ್ ಡ್ರಾವನ್ನು ಸಾವಿರಾರು ಜನರು ವೀಕ್ಷಿಸುತ್ತಿದ್ದರು. ಬಹುಮಾನ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆ ಸಂಘಟಕರೊಂದಿಗೆ ಮಾತನಾಡಿದ ಶಂತನು ಶೆಟ್ಟಿಗಾರ್, “ಈ ಗೆಲುವಿನಿಂದ ಅತೀವ ಸಂತೋಷವಾಗಿದೆ. ಆದರೆ ಈ ಹಣವನ್ನು ಏನು ಮಾಡಬೇಕೆಂದು ಇನ್ನೂ ನಿರ್ಧರಿಸಿಲ್ಲ” ಎಂದು ತಿಳಿಸಿದರು.
ಅಲ್ಲದೆ, ಈ ಟಿಕೆಟ್ ಅನ್ನು ತಾವು ಒಬ್ಬರೇ ಖರೀದಿಸಿದ್ದಲ್ಲದೆ, ಸ್ನೇಹಿತನೊಬ್ಬನ ಜೊತೆಗೂಡಿ ಖರೀದಿಸಿದ್ದಾಗಿ ಅವರು ತಿಳಿಸಿದ್ದಾರೆ. ನಿಯಮದಂತೆ ಬಹುಮಾನದ ಮೊತ್ತವನ್ನು ಇಬ್ಬರೂ ಹಂಚಿಕೊಳ್ಳಲಿದ್ದಾರೆ. ಶಂತನು ಶೆಟ್ಟಿಗಾರ್ ಅವರು ಈ ಬೃಹತ್ ಮೊತ್ತದ ಮೂಲಕ ರಾತ್ರೋರಾತ್ರಿ ಬಿಗ್ ಟಿಕೆಟ್ ಇತಿಹಾಸದ ಕೋಟ್ಯಧಿಪತಿ ಆಗಿ ಹೊರಹೊಮ್ಮಿದ್ದಾರೆ.
















