ಉಡುಪಿ:ಬೀಡಿನಗುಡ್ಡೆ ಮೈದಾನದ ಹತ್ತಿರದ ಪ್ರದೇಶ(ಬ್ಲಾಕ್ ಸ್ಟಾಟ್) ದಲ್ಲಿ ಸುಂದರ ಗಾರ್ಡನ್ ನಿರ್ಮಾಣ

ಉಡುಪಿ: ಉಡುಪಿ ನಗರವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆ ಎಸ್.ಬಿ.ಎಂ 2.0 ರ ಐಇಸಿ ಘಟಕದ ಇಂಟರ್ ಪರ್ಸನಲ್ ಕಮ್ಯೂನಿಕೇಶನ್ ಸ್ಕಿಲ್ ಉಪಘಟಕದಡಿ ನೇಮಕಗೊಂಡ 24 ಮಂದಿ ಕಮ್ಯೂನಿಟಿ ಮೊಬಿಲೈಸರ್‌ಗಳು ಪೌರಾಯುಕ್ತರ ಮಾರ್ಗದರ್ಶನದಲ್ಲಿ ಉಡುಪಿ ನಗರಸಭೆಯ ಆರೋಗ್ಯ ನಿರೀಕ್ಷರು ಮತ್ತು ಸೂಪರ್ ವೈಸರ್ ಗಳ ಸಹಯೋಗದೊಂದಿಗೆ, ಉಡುಪಿ ನಗರವನ್ನು ಸ್ವಚ್ಛವಾಗಿರಿಸುವ ಕಾಯಕದಲ್ಲಿ ನಿರಂತರ ತೊಡಗಿದ್ದಾರೆ.

ಮುಂದುವರಿದ ಭಾಗವಾಗಿ ಸಿಟಿ ವಿಭಾಗದ ಕಮ್ಯೂನಿಟಿ ಮೊಬಿಲೈಸರ್ ಗಳು ಬೀಡಿನಗುಡ್ಡೆ ಮೈದಾನದ ಹತ್ತಿರದ ಪ್ರದೇಶ(ಬ್ಲಾಕ್ ಸ್ಟಾಟ್)ದಲ್ಲಿ ಸುಂದರ ಗಾರ್ಡನ್ ನಿರ್ಮಿಸಿ ಮತ್ತೆ ಅಲ್ಲಿ ಕಸದ ರಾಶಿ ಬೀಳದ ಹಾಗೆ ಬ್ಯಾನರ್ ಅಳವಡಿಸಿದ್ದಾರೆ. ನಗರವನ್ನು ಸ್ವಚ್ಛ ಸುಂದರವಾಗಿಸುವ ಇಂತಹ ಕಾರ್ಯ ನಿರಂತರ ನಡೆಯುತ್ತಿದ್ದು ನಗರಸಭೆಯ ಕಮ್ಯೂನಿಟಿ ಮೊಬಿಲೈಸರ್‌ಗಳ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಉಡುಪಿ ಜಿಲ್ಲೆ ಸ್ವಚ್ಛ ಜಿಲ್ಲೆಯಾಗಲಿದೆ.

ಈ ಬಗ್ಗೆ ಪರಿಸರ ಅಭಿಯಂತರ ರವಿಪ್ರಕಾಶ್ ಮಾಹಿತಿ ನೀಡಿ, ಬ್ಲಾಕ್ ಸ್ಪಾಟ್‌ಗಳಲ್ಲಿ ಸಾರ್ವಜನಿಕರು ಹಾಕುವ ಕಸವನ್ನು ವಿಲೇವಾರಿ ಮಾಡುವುದರಿಂದ ಅಲ್ಲಿ ಮತ್ತೆ ಮತ್ತೆ ಕಸದ ರಾಶಿ ಬೀಳುತ್ತಲೇ ಇರುತ್ತದೆ ವಿನಃ ಕಸ ಕಡಿಮೆಯಾಗುವುದಿಲ್ಲ. ಆದ್ದರಿಂದ ಸ್ವಚ್ಛ ಉಡುಪಿ ಪರಿಕಲ್ಪನೆಗೆ ತ್ಯಾಜ್ಯ ವಿಲೇವಾರಿ ಮಾಡುವುದೊಂದೇ ಪರಿಹಾರವಲ್ಲ ಅಲ್ಲದೇ ಕಸ ಹಾಕಿದವರಿಗೆ ದಂಡವಿಧಿಸುವುದು ಕೂಡಾ ನಿರಂತರ ಸಾಧ್ಯವಿಲ್ಲ. ಆದ್ದರಿಂದ ತ್ಯಾಜ್ಯ ರಾಶಿ ಇರುವ ಪ್ರದೇಶದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಿ ಆ ಪ್ರದೇಶವನ್ನು ಸುಂದರ ಪ್ರದೇಶವಾಗಿ ಮಾರ್ಪಾಡು ಮಾಡಿ ಗಾರ್ಡನ್ ನಿರ್ಮಿಸಿ ಬ್ಯಾನರ್ ಹಾಕುವ ಮೂಲಕ ಬ್ಲಾಕ್ ಸ್ಪಾಟ್‌ಗಳನ್ನೇ ನಿರ್ಮೂಲನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಇದೇ ರೀತಿ ಬ್ಲಾಕ್ ಸ್ಪಾಟ್ ಗಳನ್ನು ಬ್ಯೂಟಿಫಿಕೇಶನ್ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಆರೋಗ್ಯ ನಿರೀಕ್ಷಕ ಸತೀಶ್, ಪ್ರಕಾಶ್ ಪ್ರಭು, ಹರೀಶ್ ಬಿಲ್ಲವ ಹಾಗೂ ಸಿಟಿ ವಿಭಾಗದ ಸೂಪರ್ ವೈಸರ್‌ಗಳು, ಕಮ್ಯೂನಿಟಿ ಮೊಬಿಲೈಸರ್‌ನವರು ಭಾಗವಹಿಸಿದ್ದರು.