ಕೇಂದ್ರ ಬಜೆಟ್ 2047ರ ಮೋದಿ ಕನಸಿನ ‘ವಿಕಸಿತ ಭಾರತ’ದತ್ತ ಇಟ್ಟಿರುವ ಧೃಡ ಹೆಜ್ಜೆ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ರೂ.53.5 ಲಕ್ಷ ಕೋಟಿ ಗಾತ್ರದ 9ನೇ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ವಿಕಸಿತ ಭಾರತ’ದತ್ತ ಇಟ್ಟಿರುವ ಇನ್ನೊಂದು ಧೃಡ ಹೆಜ್ಜೆಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ಕೇಂದ್ರ ಬಜೆಟ್ 2026ರ ಕುರಿತು ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜಗತ್ತು ಆರ್ಥಿಕ ಅನಿಶ್ಚಿತತೆಯ ತಲ್ಲಣಗಳಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ ದೇಶದ ಜನತೆಯ ಮನಸ್ಸಿನಲ್ಲಿ ಆರ್ಥಿಕ ವಿಶ್ವಾಸ ತುಂಬಿರುವ ಸ್ವಾಗತಾರ್ಹ ಬಜೆಟ್ ಇದಾಗಿದೆ. ದೀರ್ಘ ಕಾಲೀನ ಆರ್ಥಿಕ ಗುರಿಯನ್ನು ಮುಟ್ಟಲು ಅಗತ್ಯವಿರುವ ಅಲ್ಪ ಕಾಲೀನ ಯೋಜನೆಗಳೊಂದಿಗೆ ಸಮದೃಷ್ಟಿಯ ಸಂತುಲಿತ ಬಜೆಟ್.

ಯಾವುದೇ ಸಮುದಾಯವನ್ನಾಗಲಿ, ಸಾರ್ವಜನಿಕ ಸಂಸ್ಥೆಯನ್ನಾಗಲಿ, ಸಾಮಾಜಿಕ ವರ್ಗಗಳನ್ನಾಗಲಿ ತುಷ್ಟೀಕರಿಸುವ ಯೋಚನೆಗಳಿಗೆ ವಿರುದ್ಧವಾಗಿ, ಜಾಗತಿಕ ಆರ್ಥಿಕ ತಲ್ಲಣವನ್ನು ಗಮನದಲ್ಲಿರಿಸಿಕೊಂಡು ದೇಶದ ಜನತೆಯ ಭವಿಷ್ಯದ ಹಿತವನ್ನು ಕಾಪಾಡಲು ಅಗತ್ಯವಿರುವ ಯೋಚನೆ ಮತ್ತು ಯೋಜನೆಗಳನ್ನು ಹೊಂದಿರುವ ಬಜೆಟ್ ಇದಾಗಿದೆ. ಜನತೆಯ ಆಶೋತ್ತರಗಳನ್ನು ಸಾಧಿಸಬಲ್ಲ ಯೋಜನೆಗಳು ಮತ್ತು ತುಷ್ಟೀಕರಣದ ಮಾನಸಿಕತೆಯಿಂದ ಹೊರ ಬಂದು ಜನಸಾಮಾನ್ಯರನ್ನು ಕೇಂದ್ರವಾಗಿರಿಸಿರುವ ಜನಪರ ಬಜೆಟ್ ಅಭಿನಂದನೀಯ.

ಮೂಲಭೂತ ಸೌಕರ್ಯಗಳು, ಕೃಷಿ, ಉದ್ಯೋಗ, ಸೆಮಿ ಕಂಡಕ್ಟರ್, ಅಪರೂಪದ ಖನಿಜಗಳು, ಡೇಟಾ ಸೆಂಟರ್ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬನೆಯ ಯೋಜನೆಗಳ ಅಭಿವೃದ್ಧಿಗೆ ಪೂರಕವಾಗಿರುವ ಉತ್ತಮ ಬಜೆಟ್. ಉತ್ಪಾದನೆ, ಉದ್ಯೋಗ ಮತ್ತು ಸೇವಾ ಕ್ಷೇತ್ರಗಳಿಗೆ ಆದ್ಯತೆ ನೀಡಿದ ಬಜೆಟ್ ಇದಾಗಿದೆ ಎಂದರು.