ಉಡುಪಿ: ಫೆ.2ರಂದು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರ

ಉಡುಪಿ: ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಯೋಜನೆಯಡಿ ಬ್ರಾಹ್ಮಣ ಸಮುದಾಯದವರಿಗೆ ಸಿಗುವ ಧನ ಸಹಾಯ ಮತ್ತು ಇತರ ಸೌಲಭ್ಯಗಳ ಕುರಿತ ಮಾಹಿತಿ ಕಾರ್ಯಾಗಾರವನ್ನು ಫೆ.2ರಂದು ಸಂಜೆ 4ಗಂಟೆಗೆ ಉಡುಪಿ ಗೋವಿಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ‌ ನೀಡಿದ ಅವರು, 18ರಿಂದ 60ವರ್ಷದೊಳಗಿನ ಕರ್ನಾಟಕ ರಾಜ್ಯದ ನಿವಾಸಿಗಳು ಕಾರ್ಮಿಕ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರಬಾರದು. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತ್ತು ಬ್ಯಾಂಕ್ ಪಾಸ್ ಬುಕ್ ಮೊದಲಾದ ದಾಖಲಾತಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಕಾರ್ಡ್ ನಿಂದ ಸಿಗುವ ಸೌಲಭ್ಯಗಳು:
ಅಪಘಾತದಿಂದ ಮರಣ ಹೊಂದಿದರೆ ಅವರ ನಾಮನಿರ್ದೇಶಿತರಿಗೆ 1 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಅಪಘಾತದಿಂದಾಗಿ ಆಸ್ಪತ್ರೆ ವೆಚ್ಚ ಮರುಪಾವತಿ 50000 ರೂಪಾಯಿ ವರೆಗೆ ದೊರಲಿದೆ. ಅಕಾಲಿಕ ಮರಣ ಹೊಂದಿದರೆ ಫಲಾನುಭವಿಯ ಕುಟುಂಬದವರಿಗೆ ಅಂತ್ಯಕ್ರಿಯೆ ವೆಚ್ಚಕ್ಕಾಗಿ 10000 ರೂಪಾಯಿಗಳ ಧನ ಸಹಾಯ. ಈ ಕಾರ್ಮಿಕ ಕಾರ್ಡ್ ಅನ್ನು ಅರ್ಚಕರು, ಸಹಾಯಕರು, ಅಡಿಗೆ ಮಾಡುವವರು, ಬಡಿಸುವವರು, ಜ್ಯೋತಿಷ್ಯ ಹೇಳುವವರು ಇನ್ನೂ ಅನೇಕ ರೀತಿಯ ಅಸಂಘಟಿತ ವಲಯದ ಬ್ರಾಹ್ಮಣರು ಮಾಡಬಹುದಾಗಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ಪಿ.ಎಂ. ಮಾಲೇಶ್, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜ್ಯೋತಿಕೃಷ್ಣ ಹೆಬ್ಬಾರ್, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹಾಗೂ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದು, ಅವರಿಂದ ಸೌಲಭ್ಯ ಹಾಗೂ ಇತರೆ ಮಾಹಿತಿಗಳನ್ನು ಪಡೆಯಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಪ್ರೊ.ಶಂಕರ್, ಶ್ರೀನಿವಾಸ್ ಬಲ್ಲಾಳ್, ರಾಜೇಂದ್ರ ಭಟ್, ಹಯವದನ ಭಟ್, ದುರ್ಗಾ ಪ್ರಸಾದ್ ಉಪಸ್ಥಿತರಿದ್ದರು.