ಉಡುಪಿ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಕಾಪು ದಿವಾಕರ್ ಶೆಟ್ಟಿ ಅವರ ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ಮುಂಬೈಗೆ ತೆರಳಿದ್ದರು. ಪುರಸಭಾ ಸದಸ್ಯ ಸುರೇಶ್ ಶೇರಿಗಾರ್ ಎಂಬರವನ್ನು ಮನೆಯ ಉಸ್ತುವಾರಿ ನೋಡಿಕೊಳ್ಳಲು ನೇಮಿಸಿದ್ದರು. ಗುರುವಾರ ರಾತ್ರಿ ಸುರೇಶ ಅವರು ಮನೆಯ ಮೇಲ್ಮಹಡಿಯಲ್ಲಿ ಮಲಗಿದ್ದ ವೇಳೆ ಮುಸುಕುಧಾರಿಗಳು ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗ ನಗದು ದೋಚಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನೂ ಪುಡಿಗೈದಿದ್ದಾರೆ. ಕಾಪು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಬೆರಳಚ್ಚು ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
















