ಉಡುಪಿ: ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಬಾಗಿಲು ಅಳವಡಿಸದ ಬಸ್ಗಳು ಹಾಗೂ ವೇಗನಿಯಂತ್ರಕ ಅಳವಡಿಸಲಾದ ಲಾರಿಗಳ ವಿರುದ್ಧ ಪೊಲೀಸರು ಕಾರ್ಯಾ ಚರಣೆ ಆರಂಭಿಸಿದ್ದು, ಈ ಸಂಬಂಧ ಹಲವು ವಾಹನಗಳಿಗೆ ದಂಡ ವಿಧಿಸಲಾಗಿದೆ.
ಬಸ್ಗಳಿಗೆ ಬಾಗಿಲು ಅಳವಡಿಸುವಂತೆ ಹಾಗೂ ಮರಳು ಸಾಗಾಟದ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿ ಸುವ ಬಗ್ಗೆ ಗಡುವು ನೀಡಲಾಗಿತ್ತು. ಇದೀಗ ಈ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಈ ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಅದರಂತೆ ಜಿಲ್ಲೆಯ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿ, ಒಟ್ಟು 1100 ಬಸ್ಗಳನ್ನು ಪರಿಶೀಲನೆ ನಡೆಸಿದರು. ಇದರಲ್ಲಿ ಬಾಗಿಲು ಅಳವಡಿಸದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆ ಮಾಡಿರುವ ಸುಮಾರು 108 ಬಸ್ಗಳಿಗೆ ದಂಡ ವಿಧಿಸಲಾಗಿದೆ.
ಅದೇ ರೀತಿ ಮರಳು, ಕಲ್ಲು, ಮಣ್ಣು ಸಾಗಾಟ ಮಾಡುವ ಒಟ್ಟು 1352 ವಾಹನಗಳನ್ನು ಪರಿಶೀಲನೆ ನಡೆಸಿದ್ದು, ಇದರಲ್ಲಿ ಓವರ್ ಲೋಡ್, ವೇಗ ನಿಯಂತ್ರಕಗಳನ್ನು ಅಳವಡಿಸದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆ ಮಾಡಿರುವ ಸುಮಾರು 56 ವಾಹನಗಳಿಗೆ ದಂಡ ವಿಧಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ರಸ್ತೆ ಸಾರಿಗೆ ಪ್ರಾಧಿಕಾರ ಹಾಗೂ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಯಿಂದ ತೆಗೆದುಕೊಳ್ಳಲಾದ ತೀರ್ಮಾನ ಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಸ್ ಹಾಗೂ ಲಾರಿಗಳ ವಿರುದ್ಧ ಈ ರೀತಿಯ ಕಾರ್ಯಾಚರಣೆಗಳನ್ನು ಹಂತ ಹಂತವಾಗಿ ಮುಂದುವರಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
















