ಉಡುಪಿ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ವತಿಯಿಂದ ನ. 9 ಮತ್ತು 10ರಂದು ಮಣಿಪಾಲದ ಟಿಎಂಎ ಪೈ ಸಭಾಂಗಣದಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಸಾಹಿತ್ಯ ಮೇಳ ‘ಮಿಲಾಪ್–2019’ ನಡೆಯಲಿದೆ ಎಂದು ಮಾಹೆಯ ಯುರೋಪಿಯನ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ನೀತಾ ಇನಾಂದಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ. 9ರಂದು ಬೆಳಿಗ್ಗೆ 9.30ಕ್ಕೆ ರಂಗಕರ್ಮಿ ಮಹೇಶ್ ದತ್ತಾನಿ ಮೇಳಕ್ಕೆ ಚಾಲನೆ ನೀಡುವರು. ಮಾಹೆಯ ಉಪಕುಲಪತಿ ಡಾ.
ಎಚ್. ವಿನೋದ್ ಭಟ್ ಅಧ್ಯಕ್ಷತೆ ವಹಿಸುವರು ಎಂದರು.
ಅಂದು ಬೆಳಿಗ್ಗೆ 11ಗಂಟೆಗೆ ಸಾಹಿತಿ ಗಿರೀಶ್ ಕಾರ್ನಾಡ್ ನೆನಪುಗಳು ಹಾಗೂ ಆಧುನಿಕತೆ ಕುರಿತು ಸಾಹಿತಿ ಅಮೃತ್ ಗಂಗಾಧರ್, ಹೆಗ್ಗೋಡಿನ ನೀನಾಸಂ ರಂಗ ಶಿಕ್ಷಣ ಕೇಂದ್ರದ ನಾಟಕ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್, ಪ್ರಕಾಶ್ ಬೆಳವಾಡಿ, ಟಿ.ಪಿ.
ಅಶೋಕ್ ಸಂವಾದ ನಡೆಸಿಕೊಡುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಣಿಪಾಲ ಯುನಿವರ್ಸಲ್ ಪ್ರೆಸ್ ಪ್ರಕಾಶನದ ಪ್ರೊ. ಎಚ್.ಎಸ್. ಶಿವಪ್ರಕಾಶ ಅವರ ‘ದ ವರ್ಲ್ಡ್ ಇನ್ ದ ವರ್ಲ್ಡ್’, ಡಾ. ಸಯನ್ ಡೇ ಅವರ ‘ಡೆಕೊಲೊನಿಯರ್ ಎಕ್ಸಿಸ್ಟೆನ್ಸ್ ಅಂಡ್ ಅರ್ಬನ್ ಸೆನ್ಸಿಬಿಲಿಟಿ- ಆಫ್ ಸ್ಟಡಿ
ಆನ್’ ಹಾಗೂ ಮಹೇಶ್ ಎಲ್ಕುಂಚ್ಚಾರ್ ಮತ್ತು ಪ್ರೊ. ಎನ್. ಮನುಚಕ್ರವರ್ತಿ ಅವರ ‘ಕಲ್ಚರ್ ಅಂಡ್ ಕ್ರಿಯೇಟಿವಿಟಿ’ ಎಂಬ ಮೂರು ಪುಸಕ್ತಗಳು ಬಿಡುಗಡೆಗೊಳ್ಳಲಿದೆ. ಎರಡು ದಿನದ ಮೇಳದಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವರು.
ಗೋಷ್ಠಿಯಲ್ಲಿ ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ರೇವತಿ, ಕಾರ್ಯಕ್ರಮದ ಸಂಪಯೋಜಕರಾದ ಪೂನಂ, ಶ್ರೀನಿವಾಸನ್ ಆಚಾರ್ಯ, ಎನ್. ಅರವಿಂದ ಇದ್ದರು.












