ವೇತನ ಪರಿಷ್ಕರಣೆಗೆ ಆಗ್ರಹಿಸಿ ವಿಶೇಷ ಶಿಕ್ಷಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಜಿಲ್ಲೆಯ ವಿಶೇಷ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ವತಿಯಿಂದ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಜಿಲ್ಲಾ ಅಂಗವಿಕಲರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ್‌ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಶೇಷ ಮಕ್ಕಳ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಪ್ರಸ್ತುತ ಕೇವಲ 13,500 ಗೌರವಧನ ಲಭಿಸುತ್ತಿದ್ದು, ಇದರಿಂದ ಅವರ ಜೀವನ ನಿರ್ವಹಣೆ ಬಹಳ ಕಷ್ಟವಾಗಿದೆ. ಆದ್ದರಿಂದ ಈ ಗೌರವಧನವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದರ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು. 2010ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿಶೇಷ ಶಾಲೆಗಳಿಗೆ ವೇತನ ಅನುದಾನ ನೀಡುವುದನ್ನು ಆರಂಭಿಸಿದರು.
ಆದರೆ ಆ ನಂತರ ಬಂದ ಸರ್ಕಾರಗಳು ಅದನ್ನು ಪರಿಷ್ಕರಣೆ ಮಾಡಿಲ್ಲ. ಆದ್ದರಿಂದ ಈ ಬಾರಿ ವೇತನ ಪರಿಷ್ಕರಿಸದಿದ್ದರೆ, ಡಿ. 3ರಂದು ನಡೆಯುವ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಬಹಿಷ್ಕರಿಸಿ ಪ್ರತಿಭಟಿಸಲಾಗುವುದು ಎಂದು ಸಂಘವು ಎಚ್ಚರಿಕೆ ನೀಡಿದೆ.
2010–11 ಸಾಲಿನಲ್ಲಿ ಜಾರಿಗೆ ಬಂದ ಸಹಾಯಧನ ಯೋಜನೆಯಡಿ ರಾಜ್ಯದಲ್ಲಿ ಸುಮಾರು 136 ಸಂಸ್ಥೆಗಳು ಅನುದಾನ ಪಡೆಯುತ್ತಿವೆ. ಆದರೆ ಅವುಗಳಲ್ಲಿ ಕೆಲಸ ಮಾಡುವ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಕೇಂದ್ರ ಸರ್ಕಾರದ ನಿಯಮಗಳಂತೆ ಕನಿಷ್ಠ ವೇತನ ಕೂಡ ದೊರೆಯುತ್ತಿಲ್ಲ. ಹಿರಿತನಕ್ಕೂ ಮಾನ್ಯತೆ ಇಲ್ಲ. ಯಾವುದೇ ರೀತಿಯ ಸೇವಾ ಅಥವಾ ಆರ್ಥಿಕ ಭದ್ರತೆಯೂ ಇಲ್ಲದೆ, ಶಿಕ್ಷಕರು ಹಾಗೂ ಸಿಬ್ಬಂದಿ ಕಂಗಲಾಗಿದ್ದಾರೆ ಎಂದು ಆಕ್ರೋಶ
ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘದ ರಾಜ್ಯಾಧ್ಯಕ್ಷೆ ಡಾ. ಕಾಂತಿ ಹರೀಶ್‌, ಗೌರವಾಧ್ಯಕ್ಷೆ ಆಗ್ನೇಸ್‌ ಕುಂದರ್‌, ರಾಜ್ಯ ಪದಾಧಿಕಾರಿಗಳಾದ ರವೀಂದ್ರ, ಉಡುಪಿ ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಜಯವಿಜಯ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ವಿಶೇಷ ಮಕ್ಕಳ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.