ಮದುವೆ ವೇದಿಕೆಯಲ್ಲಿ ಮನೆಕಟ್ಟಲು ನೆರವು ನೀಡಿದ ಟ್ರಾಫಿಕ್ ಪೊಲೀಸ್

ಮಂಗಳೂರು: ಮದುವೆ ದಿನ ಬಡವ್ಯಕ್ತಿಗೆ ಮನೆ ಕಟ್ಟಲು ಆರ್ಥಿಕ ನೆರವು ನೀಡಿದ ಟ್ರಾಫಿಕ್ ಪೊಲೀಸ್ ಒಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇಲ್ಲಿನ ಟ್ರಾಫಿಕ್ ಪೊಲೀಸ್ ರೋಹಿತ್ ಕುಲಾಲ್ ಅವರ ಮದುವೆ ನಡೆದಿತ್ತು. ತನ್ನ ಮದುವೆ ಕಾರ್ಯಕ್ರಮದಲ್ಲಿ ಬಡವರಿಗೆ ಸಹಾಯ ಮಾಡಬೇಕು ಅಂತ ಅಭಿಲಾಷೆ ಹೊಂದಿದ್ದ ಅವರು ಇಲ್ಲಿನ ಕೇನ್ಯಾ ಗ್ರಾಮದ ನಿವಾಸಿ ಲಿಂಗು ಎಂಬುವರಿಗೆ ಮನೆ ಕಟ್ಟಲು ಮದುವೆ ಮಂಟಪದಲ್ಲಿ 25 ಸಾವಿರ ರೂ. ನೀಡಿದ್ದಾರೆ.
ಅಲ್ಲದೇ ಮನೆ ಕಟ್ಟಲು ಬೇಕಾದ ಸಾಮಾಗ್ರಿಗಳನ್ನು ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಹಣ ಮತ್ತು ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಯುವ ಬ್ರಿಗೇಡ್ ಕಾರ್ಯಕರ್ತರು ಅವರಿಗೆ ಮನೆ ಕಟ್ಟಿಕೊಡಲಿದ್ದಾರೆ.