ಉಪ್ಪಿನಂಗಡಿ: ಅನಿಲ ಟ್ಯಾಂಕರೊಂದರ ಮೇಲ್ಭಾಗದ ವಾಲ್ ಏಕಾಏಕಿ ಓಪನ್ ಆಗಿ ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿ ಸ್ಥಳದಲ್ಲಿ ಆತಂಕ ಮೂಡಿಸಿದ ಘಟನೆ ಉಪ್ಪಿನಂಗಡಿ ಬಳಿಯ ಕರ್ವೇಲ್ ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮಂಗಳೂರಿನಿಂದ ಹಾಸನ ಕಡೆ ಹೋಗುವ ಟೋಟಲ್ ಗ್ಯಾಸ್ ಕಂಪನಿಯ ಅನಿಲ ಟ್ಯಾಂಕರ್ ನ ಮೇಲ್ಭಾಗ ವಾಲ್ ಕರ್ವೇಲ್ ಬಳಿ ಬೆಳಗ್ಗೆ 8 ರ ಸುಮಾರಿಗೆ ಏಕಾಏಕಿ ತೆರೆದುಕೊಂಡಿತ್ತು. ಈ ಸಂದರ್ಭ ರಭಸದಿಂದ ನೀರು ಚಿಮ್ಮುವ ಶೈಲಿಯಲ್ಲಿ ಗ್ಯಾಸ್ ಮೇಲ್ಭಾಗಕ್ಕೆ ಚಿಮ್ಮಿ, ಗಾಳಿಯೊಂದಿಗೆ ಬೆರೆತು ಆವಿಯಾಗತೊಡಗಿತ್ತು. ಕೂಡಲೇ ಕರ್ವೇಲ್ ಮಸೀದಿಯಿಂದ ಮೈಕ್ ಅನೌನ್ಸ್ ಮಾಡಿ ಪರಿಸರದಲ್ಲಿ ಬೆಂಕಿ ಉರಿಸದಂತೆ ಮುನ್ನೆಚ್ಚರಿಕೆ ನೀಡಲಾಯಿತ್ತಲ್ಲದೆ, ಪರಿಸರದ ಮನೆಯವರನ್ನು ಸ್ಥಳಾಂತರಗೊಳಿಸಲಾಯಿತು. ಇಕ್ಕೆಲಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಯಿತು.
ಸುದ್ದಿ ತಿಳಿದು ಉಪ್ಪಿನಂಗಡಿ ಪೊಲೀಸರು, ತುರ್ತು ಅನಿಲ ಸೋರಿಕೆ ಕಾರ್ಯಾಚರಣೆ ದಳದವರು ಸ್ಥಳಕ್ಕೆ ಧಾವಿಸಿದ್ದು, ಸುಮಾರು ಒಂದೂವರೆ ಗಂಟೆಗಳ ಶ್ರಮದ ಬಳಿಕ ಗ್ಯಾಸ್ ಸೋರಿಕೆಯನ್ನು ತಡೆಗಟ್ಟಿದರು.
ಸಕಾಲಕ್ಕೆ ಬಾರದ ಅಗ್ನಿಶಾಮಕ: ಆಕ್ರೋಶ:
ಘಟನೆ ನಡೆದ ಕೂಡಲೇ ಪುತ್ತೂರು ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದು, ಆದರೆ ಅವರು ಇಲ್ಲಿಗೆ ತಲುವಷ್ಟರಲ್ಲಿ ಅನಿಲ ಸೋರಿಕೆ ತಡೆಗಟ್ಟುವ ಕಾರ್ಯಾಚರಣೆ ಮುಕ್ತಾಯಗೊಂಡಿತ್ತು. ಪುತ್ತೂರಿನಿಂದ ಇಲ್ಲಿಗೆ ಸುಮಾರು 12 ಕಿ.ಮೀ. ಅಂತರವಿದ್ದು ಆದರೂ ಅಗ್ನಿಶಾಮಕ ದಳ ಇಲ್ಲಿಗೆ ಆಗಮಿಸುವಾಗ ಒಂದೂವರೆ ಗಂಟೆ ಕಳೆದಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.