ಉಡುಪಿ:ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲ ಈ ಸಂಸ್ಥೆಯ ವತಿಯಿಂದ 2 ದಿನದ ಕಾರ್ಯಗಾರ ಇಲ್ಲಿನ ಮೊಂಟಸ್ಸರಿ/ನರ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಗೆ ದಿನಾಂಕ 15 ಮತ್ತು 16, ಜನವರಿ 2026 ರಂದು ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕ್ರಿಸ್ಟಲ್ ಬಿಜ್ಹಬ್, ಒಂದನೇ ಮಹಡಿ, ಡಿಸಿ ಕಛೇರಿ ಬಳಿ, ಮಣಿಪಾಲ, ಇಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ “ನಾರಿ ಶೃಂಗ” ಎಂಬ ಶೀರ್ಷಿಕೆಯ ಆಡಿಯಲ್ಲಿ ಕಾರ್ಯಗಾರ ನಡೆಯಿತು.
ಕಾರ್ಯಗಾರವನ್ನು ಮಾಹೆಯ ಎಂ.ಸಿ.ಹೆ.ಪಿ. ಕ್ಲಿನಿಕಲ್ ಸೈಕಾಲಜಿ ವಿಭಾಗ ಮುಖ್ಯಸ್ಥೆ ಡಾ. ಶ್ವೇತಾ ಟಿ.ಎಸ್. ಉದ್ಘಾಟಿಸಿ ‘ಅಸಮರ್ಥ ಕಲಿಕೆ, ನಿರ್ವಹಣೆ ಮತ್ತು ಶಿಕ್ಷಕಿಯರ ಪಾತ್ರ’ದ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ಅಧಿವೇಶನ ನಡೆಸಿದರು. ತರಗತಿಯಲ್ಲಿ ಶಿಕ್ಷಕಿಯರು ಮಕ್ಕಳ ಕಲಿಕಾ ನ್ಯೂನತೆಗಳನ್ನು ಹೇಗೆ ಕಂಡು ಹಿಡಿಯುವುದು ಅದರ ನಿರ್ವಹಣೆಯ ಬಗ್ಗೆ ವಿವರವಾಗಿ ಮಾತನಾಡಿದರು.

ತದನಂತರದ ಅಧಿವೇಶನವನ್ನು ಉಡುಪಿಯ ಯೋಗ ಶಿಕ್ಷಕ ಶ್ರೀ ಪ್ರಕಾಶ್ ನಾಯಕ್ರವರು ನಡೆಸಿದರು. ಅವರು ‘ಯೋಗ ಮತ್ತು ಮುದ್ರೆ’ಗಳ ಮಹತ್ವವನ್ನು ತಿಳಿಯಪಡಿಸುತ್ತಾ ಪ್ರತಿಯೊಬ್ಬರು ನಿರಂತರವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಮಾಡಿಸಿದರು. ಮಧ್ಯಾಹ್ನದ ಅಧಿವೇಶನವನ್ನು ಕೆ.ಎಂ.ಸಿ.ಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ. ಬ್ರಹತಿ ಪ್ರಣವಿ ದಾಸರಿಯವರು ‘ಮಹಿಳೆ ಮತ್ತು ಆರೋಗ್ಯ’ ಎಂಬ ವಿಷಯದಲ್ಲಿ ಮಹಿಳೆಯರ ಮುಟ್ಟು, ಪ್ರಸೂತಿ ಮತ್ತು ಆಹಾರದ ಕುರಿತು ಸವಿಸ್ತಾರವಾಗಿ ತಿಳಿಸುತ್ತಾ, ಆರಂಭದಲ್ಲಿಯೇ ಆರೋಗ್ಯ ಸಮಸ್ಯೆಯ ಬಗ್ಗೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು ಎಂದರು.

ಎರಡನೆಯ ದಿನದ ಮೊದಲನೆಯ ಅಧಿವೇಶನವನ್ನು ಮಾಧವ ಕೃಪಾ ಶಾಲೆಯ ಹಿರಿಯ ದೈಹಿಕ ಶಿಕ್ಷಕಿ ಶ್ರೀಮತಿ ಶಾಲಿನಿ ಎಸ್. ಇವರು ‘ದೈಹಿಕ ಶಿಕ್ಷಣ’ ಎಂಬ ವಿಷಯದ ಬಗ್ಗೆ ಮಾತನಾಡುತ್ತ ಪ್ರತಿಯೊಬ್ಬರು ದೈಹಿಕವಾಗಿರಲು ವ್ಯಾಯಾಮವು ಅತಿಮುಖ್ಯ ಹಾಗೂ ಶಾಲೆಯಲ್ಲಿ
ಮಕ್ಕಳನ್ನು ಕೇವಲ ಪಾಠ ಪುಸ್ತಕಕ್ಕೆ ಮೀಸಲಿರಿಸದೆ ಅವರಿಗೆ
ಆಟೋಟದಲ್ಲಿಯೂ ಭಾಗವಹಿಸಲು ಉತ್ತೇಜಿಸಿದರೆ, ಸುದೃಢವಾಗಿ ಮತ್ತು ತರಗತಿಯಲ್ಲಿ ಏಕಾಗ್ರತೆಯಿಂದ ಇರಬಹುದು ಎಂದರು. ನಂತರ ಕೆಲವು ಆಟಗಳನ್ನು ವಿದ್ಯಾರ್ಥಿ ಶಿಕ್ಷಕಿಯರಿಗೆ ಪ್ರಾತಿಕ್ಷಿತೆಯೊಂದಿಗೆ ಮಾಡಿಸಿದರು.

ತದನಂತರ ‘ಮಹಿಳೆಯರ ಕಾನೂನು’ ಎಂಬ ವಿಷಯದ ಬಗ್ಗೆ ಉಡುಪಿಯ ಹಿರಿಯ ವಕೀಲರಾದ ಸಂತೋಷ್ ಹೆಬ್ಬಾರ್ರವರು ವಿದ್ಯಾರ್ಥಿ ಶಿಕ್ಷಕಿಯರಿಗೆ ಉಪಯುಕ್ತ ಮಾಹಿತಿ ನೀಡಿದರು.
ಮಧ್ಯಾಹ್ನ ‘ತರಗತಿಯ ನಿರ್ವಹಣೆ’ ಎಂಬ ವಿಷಯದ ಬಗ್ಗೆ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ರೂಪಾ ಡಿ. ಕಿಣಿಯವರು ಮಾತನಾಡಿದರು. ಪೂರ್ವ ಪ್ರಾಥಮಿಕ ಶಿಕ್ಷಕಿಯರು ತರಗತಿಯಲ್ಲಿ ಎದುರಿಸುವ ಸಮಸ್ಯೆಗಳು ಹಾಗೂ ಅದನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂದು ಕೂಲಂಕುಶವಾಗಿ ವಿವರಿಸಿದರು. ಅದಲ್ಲದೆ ಉದ್ಯೋಗ ಪಡೆಯುವಲ್ಲಿ ಉದ್ಯೋಗ ಅರ್ಜಿ ಹಾಗೂ ಸಂದರ್ಶನ ಹೇಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಸಲಹೆಗಳನ್ನು ನೀಡಿದರು.

ಕಾರ್ಯಗಾರದ ಅಧ್ಯಕ್ಷತೆಯನ್ನು ಶ್ರೀಮತಿ ಚಂದ್ರಕಲಾರವರು
ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮುಖ್ಯ ಸಲಹೆಗಾರರಾದ ಡಾ. ಎನ್.ವಿ. ಕಾಮತ್ರವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಸುನೀತಾ, ಉಪನ್ಯಾಸಕರು ಮತ್ತು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಸಕ್ತ ಸಾಲಿನ ವಿದ್ಯಾರ್ಥಿ ಶಿಕ್ಷಕಿಯರು ಕಾರ್ಯಕ್ರಮವನ್ನು ನಿರೂಪಿಸಿದರು.


















