ಸಂಸದ ಕೋಟರಿಂದ ಕಟಪಾಡಿ ಓವರ್ ಪಾಸ್ ಕಾಮಗಾರಿ ವೀಕ್ಷಣೆ

ಉಡುಪಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ಆಗಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆ. ಸದ್ಯ ಕಾಮಗಾರಿ ಆರಂಭಗೊಂಡಿದ್ದು ಕಾಮಗಾರಿ ವೇಗ ಪಡೆದುಕೊಳ್ಳುತ್ತಿದೆ. ಮಳೆಗಾಲ ಆರಂಭವಾಗುವ ಮೊದಲು ಬಹುತೇಕ ಕಾಮಗಾರಿ ಮುಗಿಸಬೇಕೆಂಬುದು ಇಂಜಿನಿಯರ್ ತಯಾರಿ ನಡೆಸಿದ್ದಾರೆ.

ಕಾಮಗಾರಿ ಸ್ಥಳಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಸದ್ಯ ಕಾಮಗಾರಿ ಆಗುತ್ತಿರುವುದರಿಂದ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದರೆ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡದೆ ವಾಹನ ಚಲಾವಣೆ ಮಾಡುತ್ತಾರೆ ಮತ್ತು ಜನರು ಅಡ್ಡಾದಿಡ್ಡಿ ಓಡಾಟ ಮಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಹೈವೇ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಕಟಪಾಡಿ ಜಂಕ್ಷನ್ ನಿಂದ ಮಂಗಳೂರು ಕಡೆ ಹೋಗುವ ಬಸ್ಸುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಬೇರೆ ವಾಹನಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಗ್ರಾಮಸ್ಥರು ಸಂಸದರ ಗಮನಕ್ಕೆ ತಂದರು.

ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಪ್ರಥಮ ಹಂತದ ರಸ್ತೆ ಕಾಮಗಾರಿಯನ್ನು ಪೂರೈಸಲಾಗುತ್ತದೆ. ಮೇಲ್ಸೇತುವೆ ರಚನೆ ಮಾಡಿ ಬಳಿಕ ಎರಡನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಾರೆ. ಆದಷ್ಟು ಬೇಗದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದರು.

ಹೆಜಮಾಡಿ -ಕುಂದಾಪುರ ವರೆಗಿನ 64 ಕಿ.ಮೀ. ಶಾಶ್ವತ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಸಾರ್ವಜನಿಕರ ಸಹಕಾರ ಬಯಸುವುದಾಗಿ ತಿಳಿಸಿದರು.

ಸಂತೆಕಟ್ಟೆ ಭಾಗದಲ್ಲಿ ನಡೆಯುವ ರಾ.ಹೆ. ನಿರ್ಮಾಣ ಕಾಮಗಾರಿಯು ಈಗಾಗಲೇ ಗುತ್ತಿಗೆದಾರರಿಗೆ ನೀಡಲಾಗಿರುವ ಅವಧಿಯೊಳಗೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.