ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವದ ಮಂಗಳಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಪೊಡವಿಗೊಡೆಯ ಶ್ರೀಕೃಷ್ಣನ ಉತ್ಸವವನ್ನು ಸಪ್ತರಥೋತ್ಸವ (ಏಳುರಥ)ದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಕೃಷ್ಣನ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ದೇವರಿಗೆ ಪೂಜೆ, ನೈವೇದ್ಯ ಸಮರ್ಪಿಸಿ ಮಹಾ ಮಂಗಳಾರತಿ ನೇರವೇರಿಸಿದ ನಂತರ ಸಪ್ತರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಚಂಡೆ, ಮಂಗಳವಾದ್ಯ, ವೇದ ಘೋಷಗಳೊಂದಿಗೆ ಭಕ್ತರು ಒಂದೊಂದಾಗಿ ರಥವನ್ನು ಎಳೆದು ಭಕ್ತಿ ಮೆರೆದರು. ಕೊನೆಯದಾಗಿ ಬ್ರಹ್ಮರಥವನ್ನು ಎಳೆಯಲಾಯಿತು. ಪುತ್ತಿಗೆ ಮಠದ ಮುಂಭಾಗದಲ್ಲಿ ಏಳು ರಥಗಳನ್ನು ನಿಲ್ಲಿಸಿ, ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಸಲಾಯಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ ಅವರು ಚಿನ್ನದ ರಥದಲ್ಲಿ ಸಾಗಿಬಂದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ವೈಭವದ ಸಪ್ತರಥೋತ್ಸವವನ್ನು ಕಣ್ತುಂಬಿಕೊಂಡರು. ಆಕರ್ಷಕ ಸುಡುಮದ್ದು ಪ್ರದರ್ಶನ ವೀಕ್ಷಿಸಿ ಸಂತಸಗೊಂಡರು.
















