ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಪರ್ಯಾಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಯ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪರ್ಯಾಯ ಮಹೋತ್ಸವಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಜನರು ಸೇರುವ ನಿರೀಕ್ಷೆ ಇದೆ. ಅಲ್ಲದೇ ಗಣ್ಯ ವ್ಯಕ್ತಿಗಳು ಜಿಲ್ಲಾ ಭೇಟಿ ಹಾಗೂ ಜಿಲ್ಲೆಯ ಸೂಕ್ಷ್ಮತೆಯನ್ನು ಕಂಡು ಮುಂಜಾಗ್ರತೆಗಾಗಿ ಮತ್ತು ಬಂದೋಬಸ್ತ್ ಕರ್ತವ್ಯಕ್ಕೆ ಒಬ್ಬರು ಎಸ್ಪಿ ಒಬ್ಬರು ಹೆಚ್ಚುವರಿ ಎಸ್ಪಿ ಎಂಟು ಡಿವೈಎಸ್ಪಿ 21 ಪೊಲೀಸ್ ನಿರೀಕ್ಷಕರು, 61 ಪೊಲೀಸ್ ಉಪನಿರೀಕ್ಷಕರು, 110 ಸಹಾಯಕ ಪೊಲೀಸ್ ಉಪನಿರೀಕ್ಷಕರು, 812 ಪೊಲೀಸ್ ಸಿಬ್ಬಂದಿ ಹಾಗೂ 200 ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲಾಗಿದೆ.
ಅಲ್ಲದೇ 4 ಕೆಎಸ್‌ಆರ್‌ಪಿ, 14-ಡಿಎಆರ್, 5-ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.ಶ್ರೀಕೃಷ್ಣಮಠದ ಸುತ್ತಮುತ್ತ ಕಣ್ಣಾವಲಿಗೆ 70 ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಬಳಿ ಹೊರ ಠಾಣೆಗಳನ್ನು ತೆರೆಯಲಾಗಿದೆ. 120 ಬೈನಾಕ್ಯುಲರ್, 3 ಡೋನ್ ಕ್ಯಾಮೆರಾ, 300 ಬ್ಯಾರಿಕೇಡ್‌ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
















