ಉಡುಪಿ: ನಾವು ಆಯ್ದುಕೊಳ್ಳುವ ಕೃತಿಯ ಮೂಲಭಾಷೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಗ್ರಹಿಸಿಕೊಳ್ಳುವ ಶಕ್ತಿಯಿದ್ದರೆ, ಅನುವಾದವನ್ನು ಸಮರ್ಥವಾಗಿ ಅಭಿವ್ಯಕ್ತಿಪಡಿಸಬಹುದು ಎಂದು ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಹೇಳಿದರು.
ರಥಬೀದಿ ಗೆಳೆಯರು ಉಡುಪಿ ಹಾಗೂ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಸಹಯೋಗದಲ್ಲಿ ಉಡುಪಿ ಪೇಜಾವರ ಮಠದ ಹಿಂಭಾಗದ ರಾಮವಿಠಲ ಸಭಾಭವನದಲ್ಲಿ ಶನಿವಾರ ನಡೆದ ಡಾ. ಮಹಾಲಿಂಗ ಭಟ್ ಅವರ ‘ನಾಣಜ್ಜೆರ್ ಸುದೆ ತಿರ್ಗಾಯೆರ್’ ತುಳು ಕಾದಂಬರಿಯನ್ನು ಡಾ. ಟಿ.ಕೆ. ರವೀಂದ್ರನ್ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ‘ಅನ್ ಹೆಡ್ ಸೌಂಡ್ಸ್ ಆನ್’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಕೃತಿಯ ಪರಿಚಯ ಮಾಡಿದರು.
ಭಾಷಾಂತರ ಪ್ರಕ್ರಿಯೆಯಲ್ಲಿ ಮೂಲ ಭಾಷೆ ಹಾಗೂ ಲಕ್ಷ್ಯ ಭಾಷೆ ಮುಖ್ಯವಾಗುತ್ತದೆ. ಮೂಲಭಾಷೆಯಲ್ಲಿ ಇರುವ ವಿಚಾರವನ್ನು ಅನುವಾದಿಸುವಾಗ ದಾಖಲಿಸುವ ಮತ್ತು ಅಭಿವ್ಯಕ್ತಿಪಡಿಸುವ ಶಕ್ತಿ ನಮಗೆ ಲಕ್ಷ್ಯ ಭಾಷೆಯಲ್ಲಿ ಇರಬೇಕು. ಹೆಚ್ಚು ಗ್ರಹಿಕೆ
ಇರುವ ಭಾಷೆಯನ್ನು ಲಕ್ಷ್ಯ ಭಾಷೆಯನ್ನಾಗಿ ಆಯ್ಕೆ ಮಾಡಬೇಕು ಎಂದರು.
ಭಾಷೆಗೆ ಒಳಮೈ ಮತ್ತು ಹೊರಮೈ ಇರುತ್ತದೆ. ಅದರೊಳಗೆ ಸಂಸ್ಕೃತಿ ಹಾಸುಹೊಕ್ಕಾಗಿರುತ್ತದೆ. ಸಂಗೀತ, ಲಯ, ಧ್ವನಿ ಕೂಡ ಅಡಗಿರುತ್ತದೆ. ಆದ್ದರಿಂದ ಮೂಲಭಾಷೆಯನ್ನು ಬಹಳ ಎಚ್ಚರಿಕೆಯಿಂದ ಲಕ್ಷ್ಯ ಭಾಷೆಗೆ ಅನುವಾದ ಮಾಡಬೇಕು ಎಂದು
ಹೇಳಿದರು.
ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಕೃತಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ಪ್ರಧಾನ ಸಂಪಾದಕಿ ನೀತಾ ಇನಾಂದಾರ್ ಅಧ್ಯಕ್ಷತೆ ವಹಿಸಿದ್ದರು. ಲೇಖಕರಾದ ಡಾ. ಮಹಾಲಿಂಗ ಭಟ್, ಡಾ. ಟಿ.ಕೆ. ರವೀಂದ್ರನ್, ಕಲಾವಿದೆ ಸುರಭಿ ಕೊಡವೂರು ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಸಂಸ್ಥೆಯ ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿದರು.