ಮಂಗಳೂರು: ಲಂಚ ಪಡೆಯುತ್ತಿದ್ದ ಆರೋಪದಡಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರನ್ನು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯ ಗುಪ್ತಚರ ವಿಭಾಗದ ಮುಖ್ಯಪೇದೆ ಪ್ರಶಾಂತ್ ಶೆಟ್ಟಿ, ಸಸ್ಪೆಂಡ್ ಆದ ಪೊಲೀಸ್.
ಕಂಕನಾಡಿ ಬಳಿಯ ಯೂನಿಸೆಕ್ಸ್ ಪಾರ್ಲರ್ ಮಾಲೀಕರನ್ನು ಬ್ಲ್ಯಾಕ್ ಮೇಲ್ ಮಾಡಿ ಮಾಮೂಲಿಗಾಗಿ ಕೈಚಾಚುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತೀರಿ ಎಂದು ಬೆದರಿಸಿ ಪ್ರತಿ ತಿಂಗಳು ಗೂಗಲ್ ಪೇ ಆಪ್ ಮೂಲಕ ಮಾಮೂಲಿ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ಲಂಚ ಪಡೆಯುತ್ತಿರುವ ಸಿಸಿ ಕ್ಯಾಮರಾ ದಾಖಲೆ ಮತ್ತು ಆಡಿಯೋ ದಾಖಲೆ ಸಹಿತ ಸ್ಫಾ ಮಾಲೀಕರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಮಾಮೂಲಿ ದಂಧೆಯಲ್ಲಿ ಕದ್ರಿ ಠಾಣೆಯ ಇತರೆ ಪೊಲೀಸರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತರು ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತರು, ಅಕ್ರಮ ಚಟುವಟಿಕೆ ಬಗ್ಗೆ ದೂರು ಬಂದಿದ್ದು, ಅದಕ್ಕಾಗಿ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇಲಾಖೆ ವತಿಯಿಂದ ಈ ಕುರಿತು ಸಮಗ್ರ ವಿಚಾರಣೆ ನಡೆಸಲಾಗುವುದು. ಯಾರೇ ಆಗಲಿ, ಕಾನೂನು ಮೀರಿ ವರ್ತಿಸಿದರೆ ಪೊಲೀಸ್ ಇಲಾಖೆಯು ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.