ಉಡುಪಿ ಶೀರೂರು ಪರ್ಯಾಯ: ಡಿಸಿಸಿ ಬ್ಯಾಂಕ್, ಸಮಸ್ತ ಸಹಕಾರಿ ಸಂಘಗಳಿಂದ ಹಸಿರು ಹೊರಕಾಣಿಕೆ ಸಮರ್ಪಣೆ

ಉಡುಪಿ: ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಎಲ್ಲ ಸಹಕಾರಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು.
ಸಮಸ್ತ ಸಹಕಾರಿಗಳ ಸಹಕಾರದೊಂದಿಗೆ ಸುಮಾರು 25 ಲಕ್ಷ ರೂ. ಮೌಲ್ಯದ ತೆಂಗಿನಕಾಯಿ, ಅಕ್ಕಿ, ಬೆಲ್ಲ, ಸಕ್ಕರೆ, ಬೇಳೆ, ಎಣ್ಣೆ, ತುಪ್ಪ, ತರಕಾರಿ ಸೇರಿದಂತೆ ಬೃಹತ್ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು.

40ಕ್ಕೂ ಅಧಿಕ ವಾಹನಗಳಲ್ಲಿ ಹಸಿರು ಹೊರೆಕಾಣಿಕೆಯ ವಸ್ತುಗಳನ್ನು ತುಂಬಿಸಿಕೊಂಡು ತಟ್ಟಿರಾಯ, ಬಿರುದಾವಳಿ, ಪಟಾಕಿ, ವಾದ್ಯಘೋಷದೊಂದಿಗೆ ಮೆರವಣಿಗೆ ಸಾಗಿಬಂತು. ಜೋಡುಕಟ್ಟೆಯಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆಯು ಕೋರ್ಟ್ ರಸ್ತೆ ಕೆ.ಎಂ. ಮಾರ್ಗ, ತ್ರಿವೇಣಿ ವೃತ್ತ, ಕನಕದಾಸ ರಸ್ತೆ ರಥಬೀದಿ, ವಿದ್ಯೋದಯ ಶಾಲೆ ಮಾರ್ಗವಾಗಿ ಅನ್ನ ವಿಠಲ ಉಗ್ರಾಣ ತಲುಪಿತು. ಪರ್ಯಾಯ ಸ್ವಾಗತ ಸಮಿತಿಯ ಸಂಚಾಲಕರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮೋಹನ್ ಭಟ್, ಕೋಶಾಧಿಕಾರಿ ಎಚ್. ಜಯಪ್ರಕಾಶ್ ಕೆದ್ಲಾಯ ಸಹಿತ ಪ್ರಮುಖರು ಜತೆಗಿದ್ದರು.

ಸಹಕಾರಿಗಳ ಹೊರೆಕಾಣಿಕೆ ಸಮರ್ಪಣೆ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ| ಬೆಳವು ದೇವಿಪ್ರಸಾದ್ ಶೆಟ್ಟಿ, ಸಹಕಾರಿ ಪ್ರಮುಖರಾದ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಅನುಷಾ ಕೋಟ್ಯಾನ್, ಕಾಪು ದಿವಾಕರ ಶೆಟ್ಟಿ, ಸುರೇಶ್ ಶೆಟ್ಟಿ ಮೈರ್ಮಾಡಿ, ಅಶೋಕ್ ಕುಮಾರ್ ಶೆಟ್ಟಿ, ವಿಜಯ ಕುಮಾ‌ರ್ ಉದ್ಯಾವರ, ರಾಜೇಶ್ ಸೇರಿಗಾರ್, ರಾಜೇಶ್ ಹೆಗ್ಡೆ, ಶರತ್ ಕುಮಾರ್ ಶೆಟ್ಟಿ ಹರೀಶ್ ಕಿಣಿ ಅಲೆವೂರು ಮೊದಲಾದವರು ಉಪಸ್ಥಿತರಿದ್ದರು.