ಪೊಲೀಸ್ ಠಾಣೆಗಳನ್ನು ಬಲಪಡಿಸುವ ಕಾರ್ಯಕ್ಕೆ ಸರ್ಕಾರ ಸಿದ್ಧ: ಬೊಮ್ಮಾಯಿ

ಕುಂದಾಪುರ: ಪೊಲೀಸರು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಪೊಲೀಸರ ಸ್ಥಿತಿಗತಿಗಳನ್ನು ಸುಧಾರಣೆ ಮಾಡಿ, ಅವರ ಸೇವೆಗಳನ್ನು ಉತ್ತಮಗೊಳಿಸುವ ಮತ್ತು ಪೊಲೀಸರು ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಗಳನ್ನು ಬಲಪಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದ್ದು, ಪೊಲೀಸ್ ವ್ಯವಸ್ಥೆ ಬದಲಾಗುತ್ತಿದೆ ಎಂದು ಗೃಹ ಸಚಿವ ಹಾಗೂ ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಅವರು ಶುಕ್ರವಾರ ಬೈಂದೂರು ಪೊಲೀಸ್ ಠಾಣೆಯ ಬಳಿ ನೂತನವಾಗಿ ನಿರ್ಮಾಣಗೊಂಡ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಅಪರಾಧವನ್ನು ಕ್ಲಪ್ತ ಸಮಯದಲ್ಲಿ ಭೇದಿಸುವ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಪರಿಕಲ್ಪನೆಯನ್ನು ಹೊರತರಲು ಮುಂದಾಗಿದ್ದು, ಪೊಲೀಸರಿಗೆ ಬೇಕಾಗಿರುವ ಎಲ್ಲಾ ಅಗತ್ಯ ಪರಿಕರಗಳನ್ನು ಒದಗಿಸುತ್ತೇವೆ. ಒಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಬದ್ದವಾಗಿದೆ ಎಂದು ಗೃಹಸಚಿವ ಬೊಮ್ಮಾಯಿ ಹೇಳಿದರು.

ತಂತ್ರಜ್ಙಾನವನ್ನು ಜನರು ಹೆಚ್ಚೆಚ್ಚು ಉಪಯೋಗಿಸಿದಂತೆ ಅಪರಾಧಗಳು ಹೆಚ್ಚಾಗುತ್ತಾ ಹೋಗುತ್ತದೆ. ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಖಾತೆದಾರನಿಗೆ ಗೊತ್ತಿಲ್ಲದಂತೆ ಎಗರಿಸುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅದಕ್ಕಾಗಿಯೇ ಸೈಬರ್ ಕ್ರೈಂ ಅನ್ನು ಗಟ್ಟಿಗೊಳಿಸುವ ಕೆಲವನ್ನು ಮಾಡುತ್ತಿದ್ದೇವೆ. ಈಗಾಗಲೇ ಹಿರಿಯ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕೆಂದು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕರಾವಳಿ ಕಾವಲು ಪಡೆಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ ಅದಕ್ಕಾಗಿಯೇ ಹೆಚ್ಚಿನ ಹಣವನ್ನು ಮೀಸಲಿಡಲು ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಈಗಿರುವಂತಹ ಬೋಟ್‌ಗಳು, ಪರಿಕರಗಳು ಸಾಲದು. ಸ್ಪೀಟ್ ಬೋಟ್‌ಗಳು ಮತ್ತೆ ಏನೆಲ್ಲಾ ಅವಶ್ಯಕತೆ ಇವೆ ಎಂಬ ವರದಿಯನ್ನು ತರಿಸಿಕೊಂಡಿದ್ದೇನೆ ಎಂದರು.

ಎಲ್ಲಿ ಶಾಂತಿ ನೆಲೆಸುತ್ತದೋ ಅಲ್ಲಿ ಮಾತ್ರ ಪ್ರಗತಿಯಾಗಲು ಸಾಧ್ಯ. ಶಾಂತಿ-ಸುವ್ಯವಸ್ಥೆಗೆ ಅತೀ ಹೆಚ್ಚಿನ ಒಲವನ್ನು ನೀಡಬೇಕಿದೆ. ಬೈಂದೂರು ಜನರು ಶಾಂತಿಪ್ರಿಯರು. ನಾವು ಶಾಂತಿಪ್ರಿಯ ಜನರಿಗೆ ರಕ್ಷಣೆ ಕೊಟ್ಟಾಗ ಇಡೀ ಸಮಾಜವು ಉತ್ತಮ ದಿಕ್ಕಿನತ್ತ ಸಾಗುತ್ತದೆ ಎಂದು ಸಚಿವ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ರಘುಪತಿ ಭಟ್, ಭಟ್ಕಳ ಶಾಸಕ ಸುನಿಲ್ ನಾಯ್ಕ್, ತಾ.ಪಂ ಅಧ್ಯಕ್ಷೆ ಶ್ಯಾಮಲ ಕುಂದರ್, ಯಡ್ತೆರೆ ಗ್ರಾ,ಪಂ ಅಧ್ಯಕ್ಷೆ ಮುಕಾಂಬು, ಸಹಾಯಕ ಆಯುಕ್ತ ರಾಜು. ಕೆ, ಉಡುಪಿ ಜಿಲ್ಲಾ ಎಸ್‌ಪಿ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಜಿ ನಾಯ್ಕ್, ಪಿಎಸ್‌ಐ ತಿಮ್ಮೇಶ್ ಬಿಎನ್ ಮೊದಲಾದವರು ಉಪಸ್ಥಿತರಿದ್ದರು.