ಕುಂದಾಪುರ: ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರು; ಮಧ್ಯರಾತ್ರಿವರೆಗೆ ಬಂಡೆಯ ಕೆಳಗೆ ಕುಳಿತ ಬಾಲಕ!

ಕುಂದಾಪುರ: ಮನೆಯ ಬಳಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕ ಸಂಜೆ ಬಳಿಕ ನಾಪತ್ತೆಯಾದ ಕಾರಣ ಕೆಲಕಾಲ ಸೃಷ್ಟಿಯಾಗಿದ್ದ ಆತಂಕವನ್ನು ಗಂಗೊಳ್ಳಿ ಪೊಲೀಸರು ಹಾಗೂ ಸಾರ್ವಜನಿಕರು ಸತತ ಕಾರ್ಯಾಚರಣೆಯ ಮೂಲಕ ದೂರ ಮಾಡಿದರು.

ಗುಜ್ಜಾಡಿ ಬೆಣ್ಣೆರೆಯಲ್ಲಿನ 4ನೇ ತರಗತಿ ವಿದ್ಯಾರ್ಥಿ ಬುಧವಾರ ಶಾಲೆಬಿಟ್ಟು ಮನೆಗೆ ಬಂದು ಆಟವಾಡಿಕೊಂಡಿದ್ದ. ಕತ್ತಲೆ ಕವಿದರೂ ಮನೆಗೆ ಬಾರದೇ ಇದ್ದುದರಿಂದ ಹುಡುಕಾಟ ನಡೆದಿತ್ತು. ರಾತ್ರಿಯಾದರೂ ಸಿಗದ ಕಾರಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಮನೆ ಪಕ್ಕದ ಎತ್ತರದ ಬಂಡೆಯ ಕೆಳಭಾಗದಲ್ಲಿ ಕುಳಿತುಕೊಂಡಿದ್ದ ಬಾಲಕ ರಾತ್ರಿ 12.40ರ ಸುಮಾರಿಗೆ ಪತ್ತೆಯಾಗಿದ್ದಾನೆ.

ಬಿದ್ದು ಗಾಯಗೊಂಡಿದ್ದ ಬಾಲಕ ಮನೆಗೆ ಹೋದರೆ ಬೈಯ್ಯುತ್ತಾರೆ ಎಂದು ಹೆದರಿ ಮನೆಗೆ ತೆರಳದೆ ಮನೆಯ ಮೇಲಿನ ಬಂಡೆಕಲ್ಲಿನ ಕೆಳಗೆ ಅಡಗಿ ಕುಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಐ ಪವನ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.