ಉಡುಪಿ: ರಸ್ತೆ ಸುರಕ್ಷತಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿದ ನಿರ್ದೇಶನದಂತೆ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಜನವರಿ 20 ರ ಒಳಗಾಗಿ ಕಡ್ಡಾಯವಾಗಿ ಬಾಗಿಲನ್ನು (ಡೋರ್) ಅಳವಡಿಸಿಕೊಂಡು ಸಂಚರಿಸಬೇಕು.
ಮರಳು, ಮಣ್ಣು, ಕೆಂಪುಕಲ್ಲು, ಶಿಲೆಕಲ್ಲು ಸಹಿತ ಖನಿಜ ವಸ್ತುಗಳನ್ನು ಸಾಗಿಸುವ 6 ಚಕ್ರ ಮತ್ತು ಅದಕ್ಕಿಂತ ಮೇಲ್ಪಟ್ಟ ಲಾರಿ, ಟಿಪ್ಪರ್ ವಾಹನಗಳಿಗೆ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್) ಗಳನ್ನು 10 ದಿನಗಳ ಒಳಗಾಗಿ ಕಡ್ಡಾಯವಾಗಿ ಅಳವಡಿಸುವಂತೆ ವಾಹನ ಮಾಲೀಕರು ಕ್ರಮ ವಹಿಸಬೇಕು.
ಕಾಂಕ್ರೀಟ್ ಮಿಕ್ಸರ್ ವಾಹನಗಳು ರಸ್ತೆಯಲ್ಲಿ ಸಂಚರಿಸುವಾಗ ಕಾಂಕ್ರೀಟ್ ಅನ್ನು ರಸ್ತೆಯಲ್ಲಿ ಚೆಲ್ಲದೇ ಸಾಗಾಟ ಮಾಡುವ ಕುರಿತು ಸೂಕ್ತ ಮುಂಜಾಗ್ರತಾ ಕ್ರಮ ವಹಿಸಬೇಕು.ಈ ಮೇಲ್ಕಂಡ ವಿಷಯಗಳ ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ದಂಡ ವಿಧಿಸಲಾಗುವುದು ಹಾಗೂ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
















