ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಜ. 18ರಂದು ನಡೆಯುವ ಪರ್ಯಾಯೋತ್ಸವದಲ್ಲಿ ಶ್ರೀ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಇದು ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ 253ನೆಯ ದ್ವೈವಾರ್ಷಿಕ ಪರ್ಯಾಯೋತ್ಸವ.
ಶ್ರೀಮಧ್ವಾಚಾರ್ಯರು (1238-1317) ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎರಡೆರಡು ತಿಂಗಳ (ದ್ವೈಮಾಸಿಕ ಪದ್ಧತಿ) ಅವಧಿ ಸರತಿ ಪೂಜೆಯ ವ್ಯವಸ್ಥೆಯನ್ನು ಕಲ್ಪಿಸಿದ್ದರು. ವಾದಿರಾಜ ಗುರುಸಾರ್ವಭೌಮರು (1481-1601) ಎರಡು ವರ್ಷಗಳ (ದ್ವೈವಾರ್ಷಿಕ) ಪೂಜಾ ವ್ಯವಸ್ಥೆಗೆ ಅವಧಿ ವಿಸ್ತರಿಸಿದರು.
1522ರಲ್ಲಿ ಆರಂಭಗೊಂಡ ಎರಡು ವರ್ಷಗಳ ಪರ್ಯಾಯ ಪೂಜಾ ಪದ್ಧತಿ ಐದನೆಯ ಶತಮಾನದ ಆರಂಭದ ದಶಕದಲ್ಲಿದೆ. ಮಧ್ವಾಚಾರ್ಯರ ಕಾಲದಲ್ಲಿ ಈಗಿನಂತೆ ಮಠಗಳೆಂಬ ಸಾಂಸ್ಥಿಕ ಸ್ವರೂಪಗಳಿರಲಿಲ್ಲ. ತಣ್ತೀಪ್ರಸಾರ, ಅನುಸಂಧಾನ, ಪೂಜಾಕ್ರಮಗಳಿಗೇ ಮಹತ್ವವಿದ್ದ ಕಾಲವದು. ಶ್ರೀವಾದಿರಾಜಸ್ವಾಮಿಗಳು ಸಾಂಸ್ಥಿಕ ಸ್ವರೂಪಗಳನ್ನು ಕಲ್ಪಿಸಿದರು. ಹಿಂದೆ ಶ್ರೀಕೃಷ್ಣಮಠದ ಪರಿಸರದಲ್ಲಿಯೇ ಎಂಟು ಮಂದಿ ಸ್ವಾಮೀಜಿಯವರ ವಾಸ್ತವ್ಯ ವ್ಯವಸ್ಥೆ ಇದ್ದರೆವಾದಿರಾಜರು ಪ್ರತ್ಯೇಕ ವಾಸ ವ್ಯವಸ್ಥೆ (ಮಠ ಸಂಸ್ಥೆ) ಕಲ್ಪಿಸಿದರು.
ಅವರು ಕೆಲವು ಅಲಿಖೀತ ನಿಯಮ, ಪದ್ಧತಿಗಳಿಗೆ ನಾಂದಿ ಹಾಡಿದರು. 2 ತಿಂಗಳ ಪೂಜೆಯಿಂದ ಸುದೀರ್ಘ ತೀರ್ಥಯಾತ್ರೆ, ತಣ್ತೀಪ್ರಸಾರ ಸಾಧ್ಯವಾಗುತ್ತಿರಲಿಲ್ಲ. ಸಾಂಸ್ಥಿಕ ಸ್ವರೂಪಗಳಿರುವಾಗ ಎರಡು ವರ್ಷದ ಪೂಜಾ ಪದ್ಧತಿ ಜಾರಿಗೊಳಿಸಿದರೆ ಆಡಳಿತಾತ್ಮಕವಾಗಿ ಅನುಕೂಲ ಎಂದು ಶ್ರೀವಾದಿರಾಜರು ಈ ನಿರ್ಧಾರವನ್ನು ತೆಗೆದುಕೊಂಡರು.ಉತ್ತರ ಬದರಿಗೆ ಶ್ರೀವಾದಿರಾಜರು ತೆರಳಿ ಶ್ರೀಮಧ್ವಾಚಾರ್ಯರ ಅಣತಿ ಪಡೆದು ದ್ವೆ„ವಾರ್ಷಿಕ ಪರ್ಯಾಯ ವ್ಯವಸ್ಥೆಯನ್ನು ಜಾರಿಗೆ ತಂದರು. ಆದರೂ ಹಿಂದಿನಂತೆ ದ್ವೆ„ಮಾಸಿಕ ವ್ಯವಸ್ಥೆ ಅನುಕ್ರಮಣಿಕೆಯಂತೆಯೇ ಮುಂದುವರಿಯಿತು. ಪಲಿಮಾರು ಮಠದಿಂದ ಆರಂಭಗೊಂಡು ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಅನಂತರ ಪೇಜಾವರ ಮಠದಲ್ಲಿ ಎಂಟು ಮಠಗಳ ಪರ್ಯಾಯ ಪೂಜೆಗಳ ಒಂದು ಸುತ್ತು ಕೊನೆಗೊಳ್ಳುತ್ತದೆ. ಆಯಾ ಪರಂಪರೆಯ ಆದ್ಯ ಯತಿಗಳ ಆಶ್ರಮ ಜ್ಯೇಷ್ಠತ್ವವನ್ನು ಆಧರಿಸಿ ಇದು ಜಾರಿಗೆ ಬಂದಿದೆ. ಅನುಕ್ರಮಣಿಕೆಯಲ್ಲಿ ಈಗ ಐದನೆಯ ಸರದಿ ಬರುತ್ತಿದೆ.
ದ್ವೈವಾರ್ಷಿಕ ರೂವಾರಿ ವಾದಿರಾಜರು1522ರಲ್ಲಿ ದ್ವೈವಾರ್ಷಿಕ ಪೂಜಾ ವ್ಯವಸ್ಥೆಯನ್ನು ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿಗಳು ಆರಂಭಿಸಿದರು. ಪಲಿಮಾರು ಮಠದಿಂದ ಆರಂಭಗೊಂಡು ಐದು ಮಠಗಳ ಪರ್ಯಾಯ ಪೂಜೆಮುಗಿದ ಬಳಿಕ ಸ್ವಯಂ ವಾದಿರಾಜರು ಪ್ರಥಮ ಪರ್ಯಾಯ ಪೂಜೆಯ ವ್ರತ ಕೈಗೊಂಡದ್ದು 1532ರಲ್ಲಿ. ಆಗ ಅವರಿಗೆ 53ನೇ ವರ್ಷ. ಇದಕ್ಕೂ ಹಿಂದೆ ಎರಡು ತಿಂಗಳ ಪೂಜೆಯನ್ನೂ ಅವರು ನಡೆಸಿದ್ದರು. ಅವರು 1548-49, 1564-65, 1580-81ರಲ್ಲಿ ಪರ್ಯಾಯ ಪೂಜೆ ನಡೆಸಿದರು. ನಾಲ್ಕನೆಯ ಪರ್ಯಾಯದಲ್ಲಿ 100 ವರ್ಷ ಭರ್ತಿ. ಐದನೆಯ ಪರ್ಯಾಯದ 1596-97ರ ಅವಧಿಯಲ್ಲಿ ಶಿಷ್ಯ ಶ್ರೀವೇದವೇದ್ಯತೀರ್ಥರನ್ನು ಪೀಠದಲ್ಲಿ ಕುಳ್ಳಿರಿಸಿ ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ಸೋಂದಾ ಕ್ಷೇತ್ರದಲ್ಲಿ ತಾವು ಪರ್ಯಾಯವನ್ನು ನಡೆಸಿದರು.ಆಗ ವಾದಿರಾಜರಿಗೆ ಸುಮಾರು 116 ವರ್ಷ. 120ನೆಯ ವಯಸ್ಸಿನಲ್ಲಿ ಅವರು ಸೋಂದೆಯಲ್ಲಿ ವೃಂದಾವನಸ್ಥರಾದರು.
32ನೆಯ ಸುತ್ತಿನ 5ನೇ ಪರ್ಯಾಯ
1522ರಿಂದ ಆರಂಭಗೊಂಡ ಪರ್ಯಾಯ ವ್ಯವಸ್ಥೆ ಪ್ರತೀ 16 ವರ್ಷಕ್ಕೊಮ್ಮೆ ಒಂದೊಂದೇ ಚಕ್ರವನ್ನು ಹಾದು ಈಗ 32ನೇ ಚಕ್ರದಲ್ಲಿದೆ. 31ನೇ ಸುತ್ತು 2016-18ರಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಐತಿಹಾಸಿಕ ಐದನೆಯ ಪರ್ಯಾಯದಲ್ಲಿ (248ನೆಯ ಪರ್ಯಾಯ) ಕೊನೆಗೊಂಡಿತು. 2018ರಲ್ಲಿ ಆರಂಭಗೊಂಡ 32ನೆಯ ಚಕ್ರದಲ್ಲಿ ನಾಲ್ಕನೆಯ ಪರ್ಯಾಯವಾದ ಪುತ್ತಿಗೆ ಮಠದ ಪರ್ಯಾಯ (252) ಕೊನೆಗೊಂಡು 5ನೇ ಪರ್ಯಾಯವಾದ ಶೀರೂರು ಮಠದ ಪರ್ಯಾಯ (253) ಈ ಬಾರಿ ಆರಂಭಗೊಳ್ಳುತ್ತಿದೆ. ದ್ವೈವಾರ್ಷಿಕ ಪರ್ಯಾಯದ ಐದನೆಯ ಶತಮಾನದ ಇತಿಹಾಸ 2022ರಿಂದ ನಡೆಯುತ್ತಿದೆ.
















