ಮಂಗಳೂರು: ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರರ ಜೊತೆ ಟ್ರಾಫಿಕ್ ಪೊಲೀಸರು ದುರ್ವರ್ತನೆ ತೋರಿದ ಘಟನೆ ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ ಗುರುವಾರ ನಡೆದಿದೆ.
ಹಿಂಬದಿ ಸವಾರ ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ. ಅರ್ಧಕ್ಕೆ ನಿಲ್ಲಿಸಿದ ಬಂಟ್ವಾಳ ಟ್ರಾಫಿಕ್ ಪೊಲೀಸ್ ಎಎಸ್ಐ ಬಾಲಕೃಷ್ಣ, ಯುವಕನನ್ನು ಕಾಲರ್ ಹಿಡಿದು ತಳ್ಳುತ್ತಾ ಹೊಯ್ದಾಡಿದ್ದಾರೆ. ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ಪೇಟೆಯಲ್ಲಿ ನಡೆದಿದ್ದು ಇದನ್ನು ಇನ್ನೊಬ್ಬ ಸವಾರ ಮೊಬೈಲಿನಲ್ಲಿ ಚಿತ್ರೀಕರಿಸಿ, ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ವಿಡಿಯೋ ಈಗ ಭಾರೀ ವೈರಲ್ ಆಗಿದ್ದು ಸವಾರ ತನ್ನ ಮೇಲೆ ಕೇಸು ದಾಖಲಿಸಿ ಎಂದು ಗೋಗರೆಯುತ್ತಿದ್ದರೂ, ಟ್ರಾಫಿಕ್ ಪೊಲೀಸ್ ಕಾಲರ್ ಹಿಡಿದು ತಳ್ಳಾಡಿದ್ದಾರೆ. ರೆಕಾರ್ಡ್ ತೋರಿಸುವಂತೆ ದರ್ಪ ತೋರಿದ್ದಾರೆ. ಟ್ರಾಫಿಕ್ ಪೊಲೀಸರ ದುರ್ವರ್ತನೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.












