ಉಡುಪಿ: ಯಕ್ಷಗಾನ ಎನ್ನುವುದು ಮಿಮಿಕ್ರಿ ಅಥವಾ ಸರ್ಕಸ್ ಅಲ್ಲ. ಅದು ನಮ್ಮ ಹಿರಿಯರು ಬಿಟ್ಟು ಹೋದ ದೊಡ್ಡ ಆಸ್ತಿ. ಅದನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಹಿರಿಯ ಯಕ್ಷಗಾನ ಕಲಾವಿದ ಹಿರಿಯಡಕ ಗೋಪಾಲರಾವ್ ಹೇಳಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಯಕ್ಷಗಾನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸನ್ಮಾನ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಯಕ್ಷಗಾನ ನಮ್ಮ ಜಿಲ್ಲೆಯಲ್ಲಿ ಬೆಳೆದುಬಂದ ಶ್ರೇಷ್ಠ ಕಲೆ. ಅದನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಭಾಷೆ, ಕಲೆ, ಸಂಸ್ಕೃತಿ ಇವು ಹಿಂದೂ ದೇಶದ ದೊಡ್ಡ ಆಸ್ತಿ. ಅದನ್ನು ಯುವ ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ಆಗಬೇಕು. ಆಗ ಮಾತ್ರ ನಮ್ಮ ಯುವಜನರಲ್ಲಿ ಮಾನವೀಯ ಮೌಲ್ಯ ಸಾಧ್ಯ ಎಂದು ಹೇಳಿದರು.
ಸಾಹಿತಿ ಡಾ. ಕೆ.ಎಂ. ರಾಘವ ನಂಬಿಯಾರ್ ಮಾತನಾಡಿ, ಶಿವರಾಮ ಕಾರಂತರು ಯಕ್ಷಗಾನವನ್ನು ಅಧ್ಯಯನ ಮಾಡುವುದು ಮತ್ತು ಕಾಪಿಡುವ ರೀತಿಯನ್ನು ಕಲಿಸಿದರು. ಯಕ್ಷಗಾನವನ್ನು ಹೊರ ದೇಶಗಳಿಗೆ ತೆಗೆದುಕೊಂಡು ಹೋದರು. ಯಕ್ಷಗಾನಕ್ಕೆ ಹೊರತಾದ ಪ್ರಯೋಗ ಮಾಡಿದರು. ಆದರೆ ಎಲ್ಲ ಬದಲಾವಣೆಗಳನ್ನು ಸುಧಾರಣೆ ಎನ್ನಲಾಗದು. ಹಿರಿಯಡಕ ಗೋಪಾಲರಾಯರು ಯಕ್ಷಗಾನಕ್ಕೆ ಮದ್ದಳೆಯನ್ನು ಪರಿಚಯಿಸಿದರು. ಅದು ನಿಜವಾದ ಬದಲಾವಣೆ ಎಂದರು.
ಕಳೆದ 30 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಬೌದ್ಧಿಕತೆ ಇಲ್ಲ. ಕೇವಲ ದೈಹಿಕ ಪ್ರದರ್ಶನ ಮಾತ್ರ ಕಾಣುತ್ತಿದ್ದೇವೆ. ಇದು ಯಕ್ಷಗಾನ ಕಲೆಯ ಬೆಳೆವಣಿಗೆಗೆ ದೊಡ್ಡ ತೊಡಕಾಗಿದೆ. ಈಗಿನ ಕಲಾವಿದರಿಗೆ ಭಾಷೆಯಲ್ಲಿ ಹಿಡಿತವಿಲ್ಲ. ಹೇಳುವ ಧಾಟಿಯೂ ಅಸ್ಪಷ್ಟವಾಗಿದೆ. ಆದರೆ ತಾವು ಹೇಳುವುದೇ ಸರಿ ಎಂದು ಹೇಳುತ್ತಾರೆ. ಗೊತ್ತಿದ್ದವರೂ ಹೇಳಿಕೊಟ್ಟರೂ ಕೇಳುವ ಮನಸ್ಥಿತಿಯನ್ನು ಹೊಂದಿಲ್ಲ. ಪ್ರಶ್ನೆ ಕೇಳಬೇಡಿ ಅಂತಾರೆ. ಕಲಾವಿದರ ಇಂಥಾ ಮನಸ್ಥಿತಿ ಯಕ್ಷಗಾನ ಕಲೆಯನ್ನು ಇನ್ನಷ್ಟು ಕುಲಗೇಡಿಸುವುದರಲ್ಲಿ ಅನುಮಾನ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಕ್ಷಗಾನ ಗುರು ಸಂಜೀವ ಸುವರ್ಣ ಮಾತನಾಡಿ, ಹಿರಿಯಡಕ ಗೋಪಾಲರಾಯರನ್ನು ಈ ಇಳಿವಯಸ್ಸಿನಲ್ಲಿ ಕರ್ನಾಟಕ ಸರಕಾರ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ನಾಚಿಕೆಯ ಸಂಗತಿ. ಯಕ್ಷಗಾನ ನಮ್ಮ ದೊಡ್ಡ ಕಲೆ ಎಂದು ಹೇಳಿಕೊಳ್ಳುವ ನಾವು, ತನ್ನ ಜೀವನದುದ್ದಕ್ಕೂ ಯಕ್ಷಗಾನಕ್ಕಾಗಿ ಕೆಲಸ ಮಾಡಿದ ಗೋಪಾಲರಾಯರಿಗಾಗಿ ಏನೂ ಮಾಡಿಲ್ಲ ಎಂಬುವುದು ಖೇದಕರ ಎಂದರು.
ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ. ಮುರಳೀಧರ ಉಪಾಧ್ಯ, ಪ್ರೊ. ಎಂ.ಎಲ್. ಸಾಮಗ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ವರದೇಶಿ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ನಿರೂಪಿಸಿದರು.