ಉಡುಪಿ: ನಾವು ನಮ್ಮಲ್ಲಿರುವ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವುದರ ಮೂಲಕ ಸೌಹಾರ್ದತೆಯನ್ನು ಕಾಣಬೇಕು. ದೀಪಾವಳಿ ಹಬ್ಬ ಕೂಡ ಇದೇ ಸಂದೇಶವನ್ನು ಸಾರುತ್ತದೆ ಎಂದು ಸಾಹಿತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಡುಪಿ ವಲಯದ ಪ್ರಾದೇಶಿಕ ನಿರ್ದೇಶಕ ಕೆ.ಪಿ. ಮಹಾಲಿಂಗು ಹೇಳಿದರು.
ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಉಡುಪಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಶೋಕಮಾತಾ ಇಗರ್ಜಿಯ ವಠಾರದಲ್ಲಿ ಮಂಗಳವಾರ ಆಯೋಜಿಸಿದ ಸರ್ವ ಧರ್ಮ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೀಪಾವಳಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಹಬ್ಬ. ಅಜ್ಞಾನದಿಂದ ಜ್ಞಾನದೆಡೆಗೆ ಸಂಚರಿಸುವುದು ಎಂದರ್ಥ. ಅಜ್ಞಾನ ತೊರೆಯದೆ ಜ್ಞಾನ ಪಡೆಯಲು ಸಾಧ್ಯವಿಲ್ಲ ಎಂದರು.
ಭಾರತ ಹಲವು ಭಾಷೆ, ಜಾತಿ, ಧರ್ಮ, ಪ್ರಾಂತ್ಯ ಹಾಗೂ ಅನೇಕ ಆಚಾರ–ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡಿರುವ ಪುಣ್ಯಭೂಮಿ. ಮನುಷ್ಯ ತನ್ನಲ್ಲಿರುವ ಮೂಢನಂಬಿಕೆ, ವೈರುತ್ವ, ದ್ವೇಷ, ಅಸೂಯೆ, ಅಸಹನೆಯನ್ನು ತೊಲಗಿಸಬೇಕು. ಇವುಗಳನ್ನು ಇಟ್ಟುಕೊಂಡು ಬದುಕಲು ಸಾಧ್ಯವಿಲ್ಲ. ಇದು ಮನುಷ್ಯನಲ್ಲಿದ್ದರೆ ಅಜ್ಞಾನ, ಅಂಧಕಾರ ನೆಲೆಸುತ್ತದೆ. ಆಗ ಸೌಹಾರ್ದತೆಯಿಂದ ಬದುಕಲು ಆಗುವುದಿಲ್ಲ ಎಂದರು.
ಶೋಕಮಾತ ಇಗರ್ಜಿಯ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಲೇಖಕ ಜಿ.ಎಂ. ಶರೀಫ್ ಹೂಡೆ, ಉಡುಪಿ ಸಿಎಸ್ಐ ಜುಬ್ಲಿ ಚರ್ಚ್ ಪಾಸ್ಟರ್ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಸೌಹಾರ್ದ ಸಮಿತಿ ಸಂಚಾಲಕ ಮೈಕಲ್ ಡಿಸೋಜ ಸ್ವಾಗತಿಸಿದರು. ಸದಸ್ಯ ಚಾರ್ಲ್ಸ್ ಆ್ಯಂಬ್ಲರ್ ವಂದಿಸಿದರು. ಆಯೋಗಗಳ ಸಂಯೋಜಕ ಅಲ್ಫೊನ್ಸ್ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು.