ಉಡುಪಿ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ಗುರುವಿನ ಮಾರ್ಗದರ್ಶನ, ನಿರ್ದಿಷ್ಟ ಗುರಿ, ಯೋಗ್ಯತೆ ಹಾಗೂ ದೈವಿ ಶಕ್ತಿ ಮುಖ್ಯ. ಇವುಗಳನ್ನು ಬ್ರಾಹ್ಮಣರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಸ್. ಎಡಪಡಿತ್ತಾಯ ಹೇಳಿದರು.
ಉಡುಪಿ ಸೌತ್ ಕೆನರಾ ಕಾಸರಗೋಡು ದ್ರಾವಿಡ ಬ್ರಾಹ್ಮಣ ಎಜುಕೇಶನ್ ಸೊಸೈಟಿಯ ವತಿಯಿಂದ ಉಡುಪಿ ಅದಮಾರು ಗೆಸ್ಟ್ಹೌಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಾಹ್ಮಣಿಕೆಯ ಮೂಲಕ ಮಾನವೀಯತೆ ಮೆರೆದರೆ ಉತ್ತಮ ಬ್ರಾಹ್ಮಣರಾಗಲು ಸಾಧ್ಯ. ನಾವು ಮನುಷ್ಯರು, ಪ್ರಾಣಿಗಳಿಗಿಂತ ಭಿನ್ನರು ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು. ಬ್ರಾಹ್ಮಣರು ಕೀಳರಿಮೆಯಿಂದ ಹೊರಬಂದು ತನ್ನಲ್ಲಿರುವ ಅಗಾಧ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನೊಬ್ಬರನ್ನು ಕ್ಷುಲಕವಾಗಿ ನೋಡದೆ, ಇಚ್ಛಾಶಕ್ತಿ, ಸಾಧಿಸುವ ಛಲ ಹಾಗೂ ಭಗವಂತನ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಬದ್ಧತೆ, ಶ್ರಮ, ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದು ಒಂದುವರೆ ವರ್ಷದಿಂದ ಕುಲಪತಿ ಹುದ್ದೆಗೆ ಹೋರಾಟ ಮಾಡುವಾಗ ಬ್ರಾಹ್ಮಣರಲ್ಲಿ ಒಗ್ಗಟ್ಟಿನ ಕೊರತೆ ಇರುವುದನ್ನು ತಿಳಿದುಕೊಂಡಿದ್ದೇನೆ. ಒಕ್ಕಲಿಗರು, ಲಿಂಗಾಯಿತರಲ್ಲಿರುವ ಒಗ್ಗಟ್ಟು ಬ್ರಾಹ್ಮಣರಲ್ಲಿಲ್ಲ. ಹಾಗಾಗಿ ನಮ್ಮ ಶಕ್ತಿ ಸಮಾಜದಲ್ಲಿ ಗೋಚರಿಸುತ್ತಿಲ್ಲ. ಇದಕ್ಕೆ ನಮ್ಮವರೇ ಕಾರಣ ಹೊರತು ಹೊರಗಿನವರಲ್ಲ. ನಮ್ಮ ಆತ್ಮಶೋಧನೆ ಮಾಡಬೇಕು. ಆಗ ನಮ್ಮ ಶಕ್ತಿ ಏನೆಂಬುವುದು ತಿಳಿಯುತ್ತದೆ. ಈ ನಿಟ್ಟಿನಲ್ಲಿ ನಾವು ಭೇದಭಾವವನ್ನು ಮಾಡದೆ, ರಾಜಕೀಯವಾಗಿ ಬೆಳೆಯಲು ಪ್ರಯತ್ನಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ತ್ಯಾಗ ಮನೋಭಾವನೆ ಬೆಳೆಸಿಕೊಳ್ಳಬೇಕಾದರೆ ಹನುಮ ದೇವರ ಆರಾಧನೆ ಮಾಡಬೇಕು. ಹನುಮನಲ್ಲಿರುವ ಸ್ವಾಮಿ ಭಕ್ತಿ ಮತ್ತೊಬ್ಬರಲ್ಲಿಲ್ಲ ಎಂದರು.
ಬ್ರಾಹ್ಮಣ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಪ್ರೊ. ಶ್ರೀಶ ಆಚಾರ್ಯ, ಬೈಕಾಡಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಯು.ಕೆ. ರಾಘವೇಂದ್ರ ರಾವ್ ಸ್ವಾಗತಿಸಿದರು. ಪ್ರೊ. ಸದಾಶಿವ ಭಟ್ಟ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಆಚಾರ್ಯ ವಂದಿಸಿದರು.
ಶೋಭಾ ಮುಖನೋಡಿ ವೋಟು ಹಾಕುವಂತಾಗಲಿ
ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 25 ಮಂದಿ ಬಿಜೆಪಿ ಸಂಸದರು ಗೆದ್ದಿರುವುದು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಅಲ್ಲ. ಜನರು ಅವರಿಗೆ ಮೋದಿಯ ಮುಖ ನೋಡಿ ವೋಟು ಹಾಕಿದ್ದಾರೆ. ಹಾಗಾಗಿ ಇನ್ಮುಂದೆ ಶೋಭಾ ಅವರ ಮುಖನೋಡಿ ಜನರು ವೋಟು ಹಾಕುವಂತಾಗಬೇಕು. ಆಗ ಮಾತ್ರ ಕರ್ನಾಟಕಕ್ಕೆ ಶೋಭೆ ಬರುತ್ತದೆ. ಇಲ್ಲದಿದ್ದರೆ ಬೇತಾಳದಂತೆ ಒದ್ದಾಡಿದ್ದು ವ್ಯರ್ಥವಾಗುತ್ತದೆ ಎಂದು ವಿಶ್ವಪ್ರಿಯ ಸ್ವಾಮೀಜಿ ವ್ಯಂಗ್ಯವಾಡಿದರು.