ಕಾರ್ಕಳ: ಕಾರ್ಕಳ ತಾಲೂಕು ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ–169ರ ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ತೆರಳುವ ಸಂಪರ್ಕ ರಸ್ತೆ ಸಂಪೂರ್ಣವಾಗಿ ಕಡಿತಗೊಂಡಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾ.ಹೆ.169 ಸರ್ವಿಸ್ ರಸ್ತೆ ಕಾಮಗಾರಿ ಸಾರ್ವಜನಿಕರ ನಿರಂತರ ಒತ್ತಡದ ನಂತರ ಇತ್ತೀಚೆಗೆ ಆರಂಭಗೊಂಡಿದೆ. ಆದರೆ ಕಾಮಗಾರಿಯ ವೇಳೆ ಸಹಕಾರಿ ಸಂಘದ ಎದುರುಗಡೆ ರಸ್ತೆ ಅಗೆಯಲ್ಪಟ್ಟ ಪರಿಣಾಮ ಸಾಣೂರು, ಇರುವತ್ತೂರು, ಮೀಯಾರು ಹಾಗೂ ರೆಂಜಾಳ ಗ್ರಾಮಗಳ ಸದಸ್ಯರು ದೈನಂದಿನ ಬ್ಯಾಂಕ್ ವ್ಯವಹಾರ, ಮಾಸಿಕ ರೇಷನ್ ಸಂಗ್ರಹ ಹಾಗೂ ಕೃಷಿ ಸಂಬಂಧಿತ ಅಗತ್ಯಗಳಿಗೆ ಸಂಸ್ಥೆಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನಗಳು ಹಾಗೂ ಆಟೋ ರಿಕ್ಷಾಗಳಿಗೂ ಸಹ ಮೇಲಕ್ಕೆ ಬರುವುದಕ್ಕೆ ತೊಂದರೆ ಎದುರಾಗಿದೆ.
ರಸ್ತೆ ನಿರ್ಮಾಣಕ್ಕೆ ಮನವಿ:
ಸರ್ವಿಸ್ ರಸ್ತೆ ನಿರ್ಮಾಣ ಆರಂಭಕ್ಕೂ ಮುನ್ನ ಸಹಕಾರಿ ಸಂಘದ ಅಧ್ಯಕ್ಷ ಜಾನ್ ಆರ್. ಡಿ’ಸಿಲ್ವ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಪೂಜಾರಿ ಹಾಗೂ ನಿರ್ದೇಶಕರು ಗುತ್ತಿಗೆದಾರ ಸಂಸ್ಥೆಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರೊಂದಿಗೆ ಚರ್ಚೆ ನಡೆಸಿ, ಸಂಸ್ಥೆಯ ಮುಂಭಾಗದಲ್ಲಿರುವ ಆಲದ ಮರದ ಪಕ್ಕದ ವಿದ್ಯುತ್ ಕಂಬಗಳನ್ನು ಸುರಕ್ಷಿತ ಅಂತರಕ್ಕೆ ಸ್ಥಳಾಂತರಿಸಿ, ವಾಹನಗಳು ಸರಾಗವಾಗಿ ಸಂಸ್ಥೆಯ ಗೋದಾಮಿನವರೆಗೆ ತಲುಪುವಂತೆ ಅರ್ಧ ವೃತ್ತಾಕಾರದ ಸಂಪರ್ಕ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಗುತ್ತಿಗೆದಾರರು ಸಮ್ಮತಿ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಕಾಮಗಾರಿ ಆರಂಭಗೊಂಡು ನಾಲ್ಕು ದಿನಗಳಾದರೂ ವಿದ್ಯುತ್ ಕಂಬಗಳ ಸ್ಥಳಾಂತರವಾಗಿಲ್ಲ. ಜೊತೆಗೆ ಸಹಕಾರಿ ಸಂಸ್ಥೆಗೆ ಅಗತ್ಯವಿರುವ ಸಂಪರ್ಕ ರಸ್ತೆ ನಿರ್ಮಾಣವಾಗದೇ ಸಾರ್ವಜನಿಕರು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ. ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುವ ರೈತರು, ಗ್ರಾಹಕರು ಹಾಗೂ ಸೊಸೈಟಿ ಸದಸ್ಯರು ಪರದಾಡುವ ಸ್ಥಿತಿ ಉಂಟಾಗಿದೆ.
ಸಂತ್ರಸ್ತ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸುವ ಮುನ್ನವೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಚ್ಚೆತ್ತು, ಸಹಕಾರಿ ಸಂಸ್ಥೆಗೆ ಸುರಕ್ಷಿತ ಹಾಗೂ ಅನುಕೂಲಕರ ಸಂಪರ್ಕ ರಸ್ತೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
















