ಭ್ರೂಣಲಿಂಗ ಪರೀಕ್ಷೆ ಪತ್ತೆ ಹಚ್ಚಲು ಸ್ಟ್ರಿಂಗ್ ಆಪರೇಷನ್ ನಡೆಸಿ- ಜಿಲ್ಲಾಧಿಕಾರಿ

ಉಡುಪಿ :  ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಭ್ರೂಣಲಿಂಗ ಪರೀಕ್ಷೆ ಮಾಡುತ್ತಿರುವವನ್ನು ಪತ್ತೆ ಹಚ್ಚಲು ಸ್ಟ್ರಿಂಗ್ ಆಪರೇಷನ್ ನಡೆಸುವಂತೆ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ  ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿರಬಹುದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಕ್ಯಾನಿಂಗ್ ಸೆಂಟರ್ ಗಳಿಗೆ ದಿಢೀರ್ ಭೇಟಿ ನೀಡುವುದರ ಮೂಲಕ ಕೂಲಂಕುಷವಾಗಿ ಪರೀಕ್ಷಿಸಬೇಕು, ಕಾಯಿದೆ ರಚನೆ ಮಾಡಿದರೆ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ, ಕಾಯಿದೆಯ ಸಮರ್ಪಕ ಅನುಷ್ಠಾನ ಆಗಬೇಕು, ಸ್ಟ್ರಿಂಗ್ ಆಪರೇಷನ್ ನಡೆಸಿ, ಭ್ರೂಣಲಿಂಗ ಪತ್ತೆ ಮಾಡುವವರನ್ನು ಗುರುತಿಸಿ,   ಅವರಿಗೆ ಕಾಯಿದೆಯನ್ವಯ ಗರಿಷ್ಠ ಶಿಕ್ಷೆ ವಿಧಿಸಬೇಕು ಆಗ ಇತರರು ಎಚ್ಚರಗೊಳ್ಳುತ್ತಾರೆ ಎಂದು ಡಿಸಿ ಹೇಳಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಸೆಲ್ವರಾಜ್, ಡಿಹೆಚ್‍ಓ ಡಾ. ಅಶೋಕ್, ಜಿಲ್ಲಾ ಸರ್ಜನ್ ಡಾ. ಮುಧುಸೂಧನ್ ನಾಯಕ್, ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ. ರಾಮರಾವ್ ಹಾಗೂ ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.