ಉಡುಪಿ: ಎಳ್ಳಮಾವಾಸ್ಯೆ ಪ್ರಯುಕ್ತ ಕಡಲತೀರದಲ್ಲಿ ಸಹಸ್ರಾರು ಮಂದಿಯಿಂದ ಸಮುದ್ರಸ್ನಾನ

ಉಡುಪಿ: ಉಡುಪಿ ಜಿಲ್ಲೆಯಲ್ಲಿಂದು ಎಳ್ಳಮಾವಾಸ್ಯೆಯನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಮಲ್ಪೆ ಕಡಲತೀರದಲ್ಲಿ ಬೆಳ್ಳಂ ಬೆಳಗ್ಗೆ ಚುಮು ಚುಮು ಚಳಿಯನ್ನು ಲೆಕ್ಕಿಸದೆ ಸಾವಿರಾರು ಮಂದಿ ಸಮುದ್ರಕ್ಕೆ ಇಳಿದು ಸ್ನಾನ ಮಾಡಿದರು. ಮುಂಜಾನೆ 3 ಗಂಟೆಯಿಂದಲೇ ಸಮುದ್ರಸ್ನಾನಕ್ಕೆ ಕಡಲತೀರ ಬಳಿ ಜನ ಸೇರಿದ್ದರು.

ಉಡುಪಿ ನಗರ ಮಾತ್ರವಲ್ಲದೆ, ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಜನರು ಬಂದಿದ್ದರು. ಜನರ ಅನುಕೂಲಕ್ಕಾಗಿ ನೂರಾರು ವೈದಿಕರು ಹಾಜರಿದ್ದು, ಪಿಂಡಪ್ರದಾನದ ಸಂಪ್ರದಾಯಗಳನ್ನು ನಡೆಸಿಕೊಟ್ಟರು. ಪಿಂಡಪ್ರದಾನ ಮಾಡಿದ ಬಳಿಕ ಸಮುದ್ರದಲ್ಲಿ ಅರ್ಗ್ಯ ಬಿಟ್ಟು ಸ್ನಾನ ಮಾಡಿದರು. ಬಳಿಕ ಕಡಲ ತೀರದ ಬಳಿಯ ವಡಭಾಂಡೇಶ್ವರ ಬಲರಾಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಬಲರಾಮ ದೇವರ ದರ್ಶನ ಕೈಗೊಂಡ ಬಳಿಕ ಸಾಕ್ಷಿಗಳನ್ನು ಮುಟ್ಟಿ ಎಳ್ಳಮವಾಸ್ಯೆಯ ಆಚರಣೆಯನ್ನು ತುಳುವರು ಮಾಡುತ್ತಾ ಬಂದಿದ್ದಾರೆ. ಕೇವಲ ಮಲ್ಪೆ ಕಡಲ ತೀರ ಮಾತ್ರವಲ್ಲ ಉಡುಪಿ ಜಿಲ್ಲೆಯ ಬಹುತೇಕ ಕಡಲ ತೀರ ಪ್ರದೇಶಗಳಲ್ಲಿ ಇಂದು ಲಕ್ಷಾಂತರ ಜನ ಸಮುದ್ರ ಸ್ನಾನ ಕೈಗೊಂಡಿದ್ದಾರೆ.