ಹಿರಿಯಡ್ಕ: ಕ್ರೀಡಾ ಸ್ಪೂರ್ತಿಗೆ ಕಿಚ್ಚಾಗಿದ್ದ, ಯುವ ಜನರ ಪ್ರೇರಣೆಯಾಗಿದ್ದ, ನೂರಾರು ಜನರ ಕ್ರೀಡಾ ಬದುಕಿಗೆ ದಾರಿದೀಪವಾಗಿದ್ದ ಹಿರಿಯಡ್ಕದ ಗಾಂಧೀ ಮೈದಾನವನ್ನು ಉಳಿಸಿಕೊಡಿ, ನಮ್ಮ ಕ್ರೀಡಾ ಮನೋಭಾವಕ್ಕೆ ಪೇರಣೆನೀಡುತ್ತಿದ್ದ ಈ ಪ್ರೀತಿಯ ಮೈದಾನವನ್ನು ಉಳಿಸಿಕೊಡಿ ಎಂದು ಗೋಗರೆಯುತ್ತಿದ್ದಾರೆ ಈ ಮೈದಾನದಲ್ಲಿ ಆಟವಾಡಿದ ಯುವಕರು.
ಯಾಕಪ್ಪಾ ಅಂತದ್ದೇನಾಯ್ತು? ಈ ಮೈದಾನಕ್ಕೆ ಅಂತ ನೀವು ಕೇಳಬಹುದು. ಇಲ್ಲಿನ ಯುವಕರ ಜೀವವೇ ಆಗಿರುವ ಈ ಮೈದಾನದಲ್ಲಿ ಮರಳು ಶೇಖರಣೆ ಮಾಡಿ ಇದನ್ನು ಕ್ರಮೇಣವಾಗಿ ಮರಳು ಶೇಖರಣಾ ಸ್ಥಳ ಮಾಡುವ ಉದ್ದೇಶದಿಂದ ಮೈದಾನಕ್ಕೆ ಬೇಲಿ ಹಾಕಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿರುವುದೇ ಇಲ್ಲಿನ ಯುವ ಜನರ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಈ ಮೈದಾನ ನೂರಾರು ಕ್ರೀಡಾಳುಗಳನ್ನು ಬೆಳೆಸಿದೆ, ಪ್ರೋತ್ಸಾಹಿಸಿದೆ, ಬದುಕು ನೀಡಿದೆ ಇಲ್ಲಿ ಮರಳು ಶೇಖರಣೆ ಮಾಡಿದರೆ ಯುವಜನತೆ ಆಡಲು ಎಲ್ಲಿ ಹೋಗಬೇಕು? ಎನ್ನುವ ಪ್ರಶ್ನೆ ಎತ್ತುತ್ತಿದ್ದಾರೆ ಯುವಕರು.
ಜಿಲ್ಲಾಧಿಕಾರಿಗೆ ಮನವಿ:
ಈ ಮೈದಾನವನ್ನು ಬರೀ ಕ್ರೀಡಾ ಚಟುವಟಿಕೆಗಷ್ಟೇ ಮೀಸಲಿಡಬೇಕು, ಇಲ್ಲಿ ಮರಳು ದಾಸ್ತಾನು ಮಾಡಬಾರದು ಎನ್ನುವ ಮನವಿಯನ್ನು ಸ್ಥಳೀಯರು ಈಗಾಗಲೇ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಆದರೆ ಕೆಲವು ಸಮಯವಷ್ಟೇ ಇಲ್ಲಿ ದಾಸ್ತಾನು ಮಾಡಲಾಗುವುದು ಎಂದು ಹೇಳುವ ಮೂಲಕ ಜಿಲ್ಲಾಡಳಿತ ಸುಮ್ಮನಾಗಿದೆ.
ಕಾಡಿದ ಯುವಕರ ಭಾನಾತ್ಮಕ ಸಂದೇಶ:
ಮೈದಾನದ ಕುರಿತು ತಮಗಿರುವ ಭಾವನಾತ್ಮಕ ಸಂಬಂಧವನ್ನು ಬಿಂಬಿಸುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಕಾಡುವಂತಿದೆ. ಆ ಸಂದೇಶ ಹೀಗಿದೆ.
ನಾನು ಹಿರಿಯಡ್ಕದ ಗಾಂಧಿ ಮೈದಾನ. ನನ್ನಲ್ಲಿ ಅದೆಷ್ಟೋ ಮಕ್ಕಳು ಆಟವಾಡಿ ದ್ದಾರೆ. ದೈಹಿಕವಾಗಿ ಮಾನಸಿಕವಾಗಿ ತಮ್ಮನ್ನು ತಾವು ಸದ್ರಡವಾಗಿಸಿಕೊಂಡಿದ್ದಾರೆ. ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದ ವ್ಯಕ್ತಿ ಗಳಾಗಿ ಬೆಳೆದಿದ್ದಾರೆ. ಲೆಕ್ಕವಿಲ್ಲದಷ್ಟು ಕ್ರೀಡಾಕೂಟಗಳು ನನ್ನಲ್ಲಿ ನಿರಂತರ ನಡೆಯುತಿದೆ.
ಕೆಲವು ವರ್ಷಗಳ ಹಿಂದೆ ನವೋದಯ ಫ್ರೆಂಡ್ಸ್ ಸರ್ಕಲ್ ನ ಸದಸ್ಯರು ಸೇರಿ ಲಕ್ಷಾಂತರ ಹಣವನ್ನು ಖರ್ಚು ಮಾಡಿ ನನ್ನನ್ನು ಸುಂದರವಾಗಿಸಿದ್ದರು. ಆದರೆ ಇಂದು ನನ್ನ ಅವಸ್ಥೆ ನೋಡಿ ನನ್ನೊಳಗೆ ನಾನೇ ಮರುಕಪಡುತ್ತಿದ್ದೇನೆ. ಈವರೆಗೆ ಮೈದಾನವಾಗಿ ಸ್ವತಂತ್ರನಾಗಿದ್ದ ನಾನು ಇನ್ನು ಮುಂದೆ ಬಂದಿಯಾಗಿ ಮರಳು ಶೇಖರಣಾ ಸ್ಥಳವಾಗಿ ಮಾರ್ಪಾಡಾಗುತ್ತಿದ್ದೇನೆ.
ನನ್ನಲ್ಲಿ ಆಟವಾಡಿದ ಮಕ್ಕಳಿಗೆ ನನ್ನ ಮೇಲೆ ನಡೆಯುವ ದೌರ್ಜನ್ಯ ವನ್ನು ಪ್ರತಿಭಟಿಸುವ ಶಕ್ತಿ ಇದ್ದರೂ, ತಾಳ್ಮೆಯಿಂದ ಶಾಂತಿಯುತ ಪರಿಹಾರಕ್ಕಾಗಿ ಮೌನಕ್ಕೆ ಶರಣಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ನನ್ನನು ಉಳಿಸಿ ಬೆಳೆಸಿ ಇನ್ನಷ್ಟು ಮಕ್ಕಳಿಗೆ ಉಪಯೋಗವಾಗುವಂತೆ ನನ್ನನ್ನು ಬಳಸಬೇಕಾಗಿ ಕೇಳಿಕೊಳ್ಳುತ್ತೇನೆ.
-ಇಂತೀ, ಗಾಂಧಿ ಮೈದಾನ ಹಿರಿಯಡ್ಕ.
ಜಿಲ್ಲಾಡಳಿತ ಬರೀ ತನ್ನ ಸ್ವಾರ್ಥವನ್ನು ನೋಡದೇ ಯುವಕರ ಭಾವನೆಗಳನ್ನು ಅರ್ಥಮಾಡಿಕೊಂಡು ಮರಳು ದಾಸ್ತಾನನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಮಾಡಬೇಕು ಎನ್ನುತ್ತಿದ್ದಾರೆ ಸಾರ್ವಜನಿಕರು.