ಮುಂಬೈ: ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ ನ(Big Boss Hindi) 19ನೇ ಸೀಸನ್ ನ ಗ್ರ್ಯಾಂಡ್ ಫಿನಾಲೆಯಲ್ಲಿ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಳ್ಳುವ ಮೂಲಕ ವಿಜೇತರಾಗಿದ್ದಾರೆ.
ಬಿಗ್ ಬಾಸ್ 19ರ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮ ಸ್ಪರ್ಧಿಗಳ ನಡುವೆ ತೀವ್ರ ಹಣಾಹಣಿ ನಡೆದು, ಕೊನೆಗೂ ಗೌರವ್ ಖನ್ನಾ ವಿಜೇತರಾಗಿದ್ದು, ಫರ್ಹಾನಾ ಭಟ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಐವರು ಟಾಪ್ ಅಂತಿಮ ಸ್ಪರ್ಧಿಗಳಲ್ಲಿ ಅಮಲ್ ಮಲ್ಲಿಕ್, ಗೌರವ್ ಖನ್ನಾ, ಫರ್ಹಾನಾ ಭಟ್, ಪ್ರಣೀತ್ ಮೋರ್ ಮತ್ತು ತಾನ್ಯಾ ಮಿತ್ತಲ್ ಇದ್ದರು. ಬಿಗ್ ಬಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗೆ ಮತ ಚಲಾಯಿಸಿದ್ದರು. ಮತ ಎಣಿಕೆಯಲ್ಲಿ ಗೌರವ್ ಖನ್ನಾ ಟ್ರೋಫಿಯನ್ನು ಎತ್ತುವ ಮೂಲಕ ವಿಜೇತ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಘೋಷಿಸಿದ್ದರು.
ಆಗಸ್ಟ್ 24 ರಂದು ಬಿಗ್ ಬಾಸ್ 19ನೇ ಸೀಸನ್ 18 ಸ್ಪರ್ಧಿಗಳೊಂದಿಗೆ ಪ್ರಥಮ ಪ್ರದರ್ಶನಗೊಂಡ ಈ ಸೀಸನ್, ಹೈ-ವೋಲ್ಟೇಜ್ ಡ್ರಾಮಾ, ಭಾವನಾತ್ಮಕ ಕ್ಷಣಗಳ ವಿಶಿಷ್ಟ ಮಿಶ್ರಣ ನೀಡಿದೆ. ಮೂರು ತಿಂಗಳ ಕಾಲ, ಮನೆ ಸ್ನೇಹ, ಪೈಪೋಟಿ ಮತ್ತು ತೀವ್ರ ಸ್ಪರ್ಧೆಗಳಿಗೆ ಸಾಕ್ಷಿಯಾಗಿತ್ತು.ಟ್ರೋಫಿ ವಿಜೇತ ಗೌರವ್ ಖನ್ನಾ ಅವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದೆ. ಬಿಗ್ ಬಾಸ್ 19ರಲ್ಲಿ ಗೌರವ್ ಖನ್ನಾ ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಜಿಕೆ ಎಂದು ಕರೆಯಲ್ಪಡುವ ಗೌರವ್ ಅಭಿಮಾನಿಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ಗೌರವ್ ವಾರಕ್ಕೆ 17.5 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಬಿಗ್ ಬಾಸ್ 19ರ ಸಿಟ್ರೊಯೆನ್ ಪ್ರಾಯೋಜಕತ್ವದ ಟಾಸ್ಕ್ ನಲ್ಲಿ ಖನ್ನಾ ಜಯಗಳಿಸಿದ್ದು, 50 ಲಕ್ಷ ರೂ. ನಗದು ಜತೆ ಸಿಟ್ರೊಯೆನ್ ಕಾರನ್ನು ಗೆದ್ದಿರುವುದಾಗಿ ವರದಿ ತಿಳಿಸಿದೆ.
ಗೌರವ್ ಖನ್ನಾ ವೃತ್ತಿ ಬದುಕು:
2004ರಲ್ಲಿ ಗೌರವ್ ಖನ್ನಾ ಸ್ಟುಡಿಯೋ ಒನ್ ಶೋನಿಂದ ವೃತ್ತಿ ಜೀವನ ಆರಂಭಿಸಿದ್ದು, ನಂತರ ಕುಂಕುಮ್, ಬಾಬಿ, ಅರ್ಧಾಂಗಿನಿ ಮತ್ತು ಸಂತನ್ ನಂತಹ ಹಲವು ಜನಪ್ರಿಯ ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಅನುಪಮಾ ಧಾರವಾಹಿಯ ಪಾತ್ರದ ಮೂಲಕ ಖನ್ನಾ ಹೆಚ್ಚು ಜನಪ್ರಿಯರಾಗಿದ್ದರು. ಸೆಲೆಬ್ರಿಟಿ ಮಾಸ್ಟರ್ ಶೆಫ್ ಇಂಡಿಯಾ ಎಂಬ ಅಡುಗೆ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಟ್ರೋಫಿ ಜಯಿಸಿದ್ದರು.

















