ಜನನ ಪ್ರಮಾಣ ಫಲವತ್ತತೆ ದರ ಕುಸಿತ: ಭವಿಷ್ಯದಲ್ಲಿ ದೇಶದ ಜನಸಂಖ್ಯೆಯಲ್ಲಿ ಸ್ಥಿರತೆ ಸಾಧ್ಯತೆ.

ಕೋಲ್ಕತ್ತ: ಫಲವಂತಿಕೆ ದರ (ಫರ್ಟಿಲಿಟಿ ರೇಟ್) ಕುಸಿತದಿಂದಾಗಿ ದೇಶದ ಜನಸಂಖ್ಯೆಯು 2080ರ ವೇಳೆಗೆ ಸ್ಥಿರಗೊಳ್ಳುವ ನಿರೀಕ್ಷೆಯಿದೆ ಎಂದು ಐಐಎಸ್‌ಪಿ ಹೇಳಿದೆ.ಪ್ರಸ್ತುತ ಫಲವಂತಿಕೆಯ ದರ 1.9ರಷ್ಟಿದ್ದು, ಕಳೆದ ಎರಡು ದಶಕಗಳಲ್ಲಿ ಜನನ ಪ್ರಮಾಣವು ತೀವ್ರವಾಗಿ ಕುಸಿಯುತ್ತಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ನಮ್ಮ ದೇಶದ ಫಲವಂತಿಕೆಯ ಒಟ್ಟು ದರ 2000ನೇ ಇಸ್ವಿಯಲ್ಲಿ ಶೇಕಡ 3.5ರಷ್ಟಿತ್ತು. ಇದೀಗ ಶೇ 1.9ಕ್ಕೆ ನಿಂತಿದ್ದು, ತೀವ್ರವಾಗಿ ಕುಸಿತಗೊಂಡಿದೆ’ ಎಂದು ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್‌ ಪಾಪುಲೇಷನ್‌ನ (ಐಐಎಸ್‌ಪಿ) ಪ್ರಧಾನ ಕಾರ್ಯದರ್ಶಿ ಅನಿಲ್ ಚಂದ್ರನ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ದೇಶದ ಜನಸಂಖ್ಯೆಯು 2080ರ ವೇಳೆಗೆ 180 ಕೋಟಿ ಅಥವಾ 190 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಬೆಳವಣಿಗೆ ದರವೂ ಸ್ಥಿರಗೊಳ್ಳುವ ನಿರೀಕ್ಷೆಯಿದೆ. ಈಗಿನ ಎಲ್ಲ ಅಂದಾಜುಗಳು, ಭಾರತದ ಗರಿಷ್ಠ ಜನಸಂಖ್ಯೆಯು 200 ಕೋಟಿಗಿಂತ ಕಡಿಮೆಯಿರುತ್ತದೆ ಎಂಬುದನ್ನು ತೋರಿಸುತ್ತಿವೆ’ ಎಂದಿದ್ದಾರೆ.