ಮುಂಬೈ: ಮಹಾರಾಷ್ಟ್ರದ ನಾಂದೇಡ್’ನಲ್ಲಿ ಮಗಳ ಪ್ರೀತಿ ನಿರಾಕರಿಸಿದ ಕುಟುಂಬವೊಂದು ಆಕೆಯ ಪ್ರಿಯಕರನನ್ನೇ ಕೊಂದು ಹಾಕಿದ್ದು, ಇದಕ್ಕೆ ಆಕ್ರೋಶಗೊಂಡ ಯುವತಿ ಪ್ರತ್ಯುತ್ತರವಾಗಿ ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿರುವ ವಿಲಕ್ಷಣ ಘಟನೆ ನಡೆದಿದೆ.
ಕೊಲೆಯಾದ ಯುವಕ 25 ವರ್ಷದ ಸಕ್ಷಮ್ ಟೆಟೆ. ಅಂಚಲ್ ಮತ್ತು ಸಕ್ಷಮ್(25) ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರರ ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು. ಆದರೆ ಇವರ ಪ್ರೀತಿ ವಿಚಾರ ಯುವತಿ ಅಂಚಲ್ ರ ಕುಟುಂಬಸ್ಥರಿಗೆ ತಿಳಿದು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರಿಂದ ಯುವತಿ ಕುಟುಂಬಸ್ಥರು ಮದುವೆಗೆ ವ್ಯಾಪಕವಾಗಿ ವಿರೋಧಿಸುತ್ತಿದ್ದರು.
ಅಂಚಲ್ ಆಗಾಗ್ಗೆ ಯುವಕ ಸಕ್ಷಮ್ ಮನೆಗೆ ಹೋಗುತ್ತಿದ್ದ ವಿಚಾರ ತಿಳಿದ ಕುಟುಂಬಸ್ಥರು ಆಕೆಯನ್ನು ಆತನ ಮನೆಗೆ ಹೋಗದಂತೆ, ಆತನನ್ನು ಭೇಟಿಯಾಗದಂತೆ ಎಚ್ಚರಿಸಿದ್ದಾರೆ. ಹಲವಾರು ಬೆದರಿಕೆಗಳ ಹೊರತಾಗಿಯೂ ಆಂಚಲ್ ಮತ್ತು ಸಕ್ಷಮ್ ಟೇಟ್ ಸಂಬಂಧವನ್ನು ಮುಂದುವರೆಸಿದರು. ಈ ನಡುವೆ ಅಂಚಲ್ ಮತ್ತು ಸಕ್ಷಮ್ ಓಡಿ ಹೋಗಿ ಮದುವೆಯಾಗಲು ಸಿದ್ಧರಾಗಿದ್ದರು. ಈ ವಿಚಾರ ತಿಳಿದ ಕುಟುಂಬಸ್ಥರು ಇವರಿಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದರು.
ಅದರಂತೆ ಯುವತಿ ಅಂಚಲ್ ಸಹೋದರ ಮತ್ತು ಆಕೆಯ ತಂದೆ ಸಕ್ಷಮ್ ದಾರಿಯಲ್ಲಿ ಹೋಗುತ್ತಿದ್ದಾಗ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಆತನ ತಲೆಗೆ ಗುಂಡು ಹಾರಿಸಿ ಬಳಿಕ ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಮೃತ ದೇಹವನ್ನೇ ಮದುವೆಯಾದ ಯುವತಿ:
ಇನ್ನು ಪ್ರಿಯಕರ ಸಕ್ಷಮ್ ಕೊಲೆ ವಿಚಾರ ತಿಳಿಯುತ್ತಲೇ ಆಘಾತಕ್ಕೊಳಗಾದ ಯುವತಿ ಅಂಚಲ್ ಆತನ ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ, ಪ್ರಿಯಕರನ ಮೃತದೇಹ ನೋಡಿ ಗೋಳಾಡಿದ್ದಾಳೆ. ಅಲ್ಲದೆ ಆತನ ಮೃತದೇಹಕ್ಕೆ ಇಡಲಾಗಿದ್ದ ಸಿಂಧೂರ ಮತ್ತು ಅರಿಶಿಣವನ್ನು ತಾನೇ ಹಚ್ಚಿಕೊಂಡು, ಮಂಗಳಸೂತ್ರ ಧರಿಸಿದ್ದಾರೆ. ಆತನನ್ನು ವಿವಾಹವಾಗಿದ್ದೇನೆ. ಸೊಸೆಯಾಗಿ ಆತನ ಮನೆಯಲ್ಲೇ ಕೊನೆಯ ಉಸಿರಿರುವವರೆಗೂ ವಾಸಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾಳೆ.
ಅಲ್ಲದೆ ಸಕ್ಷಮ್ ಸಾವಿನಲ್ಲೂ ನಮ್ಮ ಪ್ರೀತಿ ಗೆದ್ದಿದ್ದು ನಮ್ಮ ಪ್ರೀತಿ ಸೋಲಿಸುವಲ್ಲಿ ನನ್ನ ತಂದೆ ಮತ್ತು ಸಹೋದರ ಸೋತಿದ್ದಾರೆ. ಅವರು ಜೀವ ತೆಗೆಯಬಹುದು.. ಆದರೆ ನಮ್ಮ ಪ್ರೀತಿ ಕೊಲ್ಲಲು ಸಾಧ್ಯವಾಹಗಲಿಲ್ಲ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ್ದಾಳೆ. ಅಲ್ಲದೆ ಸಕ್ಷಮ್ ನನ್ಮು ಕೊಂದ ತನ್ನ ಕುಟುಂಬಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾಳೆ.
ಇನ್ನು ಸಕ್ಷಮ್ ಅವರ ಅಂಗವಿಕಲ ತಂದೆ ಮತ್ತು ತಾಯಿ ಕೂಡ ತಮ್ಮ ಮಗನ ಗೆಳತಿಯನ್ನು ತಮ್ಮ ಸೊಸೆಯಾಗಿ ಸ್ವೀಕರಿಸಿದ್ದಾರೆ. ಇದೀಗ ಅಂಚಲ್ ಕುಟುಂಬಸ್ಥರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವ ನಾಂದೆಡ್ ಪೊಲೀಸರು ಅಂಚಲ್ ರ ಸಹೋದರ ಮತ್ತು ತಂದೆ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

















