ಉಡುಪಿ: ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಮಾಹೆ)ನ ಶಿಕ್ಷಣ ಸಂಸ್ಥೆಯ ಘಟಕವಾಗಿರುವ ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ 10ನೇ ತರಗತಿಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈಗೆ ಚಾತುರ್ಯ, ಸಮಯ ಪ್ರಜ್ಞೆ ಮತ್ತು ಧೈರ್ಯಶಾಲಿ ಕಾರ್ಯಕ್ಕಾಗಿ ರಾಜ್ಯ ಮಟ್ಟದ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬೆಂಗಳೂರು ಅರಮನೆ ಮೈದಾನದಲ್ಲಿ ನ.28ರಂದು ಆಯೋಜಿಸಿದ್ದ ಐಸಿಡಿಎಸ್ ಗೋಲ್ಡನ್ ಜ್ಯುಬಿಲಿ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಇನ್ನಿತರ ಗಣ್ಯರು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು.
ಹೊಯ್ಸಳ ಶೌರ್ಯ ಪ್ರಶಸ್ತಿಯು ಮಕ್ಕಳ ಧೈರ್ಯ, ಸಮಯಪ್ರಜ್ಞೆ ಮತ್ತು ತ್ವರಿತ ನಿರ್ಧಾರಶಕ್ತಿಗೆ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಗೌರವವಾಗಿದೆ. ಪ್ರಶಸ್ತಿ ಪುರಸತ ದೀಪೇಶ್ ನಮ್ಮ ಶಾಲೆಯ ಇತಿಹಾಸದಲ್ಲಿ ರಾಜ್ಯ ಮಟ್ಟದ ಗೌರವ ಸ್ವೀಕರಿಸಿದ ಮೊದಲ ವಿದ್ಯಾರ್ಥಿಯಾಗಿದ್ದಾನೆ.
2025-26ನೇ ಸಾಲಿನಲ್ಲಿ ಶಿವಮೊಗ್ಗ ಹೊರತುಪಡಿಸಿ ರಾಜ್ಯದ ‘ಏಕೈಕ ವಿಜೇತ’ ಎಂಬ ವಿಶೇಷ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ ಎಂದು ಶಾಲೆಯ ವ್ಯವಸ್ಥಾಪಕ ಮಂಡಳಿ ಹಾಗೂ ಮುಖ್ಯೋಪಾಧ್ಯಾಯಿನಿ ವಿನೋದಾ ಶೆಟ್ಟಿ ತಿಳಿಸಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

















