ಮುಂಬೈ: ಬಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋ ಆಗಿ ಒಳ್ಳೆಯ ಹೆಸರು ಗಳಿಸಿರುವ ನಟ ರಣವೀರ್ ಸಿಂಗ್ ( Ranveer Singh ) ಬಗ್ಗೆ ಎಲ್ಲರಿಗೂ ತಿಳಿದಿದೆ. ಸದಾ ಎನರ್ಜಿಟಿಕ್ ಆಗಿರುವ ರಣವೀರ್, ಯಾವುದೇ ವೇದಿಕೆಗೆ ಹೋದರೆ ತಮ್ಮ ಮಾತುಗಳ ಮೂಲಕವೇ ಮೋಡಿ ಮಾಡುತ್ತಾರೆ. ತಮಗನಿಸಿದ್ದನ್ನು ಯಾವುದೇ ಹಿಂಜರಿಕೆ ಇಲ್ಲದೇ ಮುಕ್ತವಾಗಿ ಹೇಳುತ್ತಾರೆ. ಆದರೆ, ಇತ್ತೀಚೆಗೆ ರಣವೀರ್ ಆಡಿದ ಮಾತೊಂದು ಭಾರಿ ವಿವಾದ ಸೃಷ್ಟಿಸಿದೆ. ಅದರಲ್ಲೂ ವಿಶೇಷವಾಗಿ ಕನ್ನಡ ಸಿನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಅಷ್ಟಕ್ಕೂ ಏನಾಯಿತು? ರಣವೀರ್ ಆಡಿದ ಮಾತುಗಳೇನು? ಏನಿದು ರಣವೀರ್ ವಿವಾದ? ಕನ್ನಡ ಪ್ರೇಕ್ಷಕರು ಏಕೆ ಆಕ್ರೋಶಗೊಂಡಿದ್ದಾರೆ? ಕ್ಷಮೆ ಕೋರುವಂತೆ ಏಕೆ ಆಗ್ರಹಿಸುತ್ತಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ನೀವು ಉತ್ತರ ತಿಳಿಯಲು ಬಯಸುವುದಾದರೆ ಈ ಸುದ್ದಿಯನ್ನು ಕಂಪ್ಲೀಟ್ ಓದಿ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವೇದಿಕೆಯಲ್ಲಿ ರಣವೀರ್ ಮಾತು
ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ವೇಳೆ ವೇದಿಕೆಯ ಮೇಲೆ ಮಾತನಾಡುವಾಗ ಬ್ಲಾಕ್ಬಸ್ಟರ್ ಕಾಂತಾರ ಚಿತ್ರದ ಬಗ್ಗೆ ರಣವೀರ್ ಸಿಂಗ್ ಮಾಡಿದ ಕಾಮೆಂಟ್ಗಳು ಈಗ ವಿವಾದದ ಸ್ವರೂಪ ಪಡೆದುಕೊಂಡಿವೆ. ಎರಡು ಭಾಗಗಳಲ್ಲಿ ಮೂಡಿಬಂದ ಕಾಂತಾರ ಸಿನಿಮಾ ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿ, 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು ಗೊತ್ತೇ ಇದೆ. ಈ ಚಿತ್ರದ ಬಗ್ಗೆ ಇಂದಿಗೂ ಒಳ್ಳೆಯ ಅಭಿಪ್ರಾಯಗಳು ಬರುತ್ತಲೇ ಇವೆ.
ಚಾಮುಂಡಿ ಪಾತ್ರ ಅನುಕರಣೆ
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಕಾಂತಾರ ಚಿತ್ರದ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ ರಣವೀರ್ ಸಿಂಗ್, ಪಂಜುರ್ಲಿ ದೇವತೆ ಅಥವಾ ರಿಷಭ್ ಮೈಮೇಲೆ ಬರುವ ಚಾಮುಂಡಿಯ ಪಾತ್ರವನ್ನು ಅನುಕರಣೆ ಮಾಡಿ ತೋರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೆವ್ವ ಎಂದ ರಣವೀರ್
ಅನುಕರಣೆ ಮಾಡಿದ್ದು ಇಲ್ಲಿ ದೊಡ್ಡ ಸಮಸ್ಯೆಯಲ್ಲ ಆದರೆ, ರಣವೀರ್ ಆಡಿದ ಮಾತುಗಳು ಕನ್ನಡಿಗರನ್ನು ಕೆರಳಿಸಿದೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಮೈ ಮೇಲೆ ಬರುವ ಚಾಮುಂಡಿ ದೇವಿಯನ್ನು ರಣವೀರ್ ಫೀಮೇಲ್ ಘೋಸ್ಟ್ ಎಂದು ಕರೆದಿದ್ದಾರೆ. ಘೋಸ್ಟ್ ಎಂದರೆ ದೆವ್ವ ಎಂದರ್ಥ. ಹೀಗಾಗಿ ರಣವೀರ್ ಸಿಂಗ್ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಚಾಮುಂಡಿ ತಾಯಿ ಕರ್ನಾಟಕದ ನಾಡದೇವತೆ. ನಿಮಗೆ ದೈವಕ್ಕೂ ದೆವ್ವಕ್ಕೂ ವ್ಯತ್ಯಾಸವೇ ಗೊತ್ತಿಲ್ವಾ ಎಂದು ರಣವೀರ್ ವಿರುದ್ಧ ಆಕ್ರೋಶದ ಸುರಿಮಳೆಗೈಯುತ್ತಿದ್ದಾರೆ.
ಕ್ಷಮೆ ಕೇಳುವಂತೆ ಆಗ್ರಹ
ಇನ್ನು ಕಾಂತಾರ ಚಿತ್ರದಲ್ಲಿನ ‘ಓ’ ಶಬ್ದದ ಘರ್ಜನೆಯನ್ನು ಕನ್ನಡಿಗರು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಆದರೆ, ರಣವೀರ್ ಸಿಂಗ್ ಅಂತಹ ಶಬ್ದವನ್ನು ಗೇಲಿ ಮಾಡಿ ಭವ್ಯ ವೇದಿಕೆಯಲ್ಲಿ ಅವಮಾನಕರವಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗುತ್ತಿದೆ. ಅಲ್ಲದೆ, ರಣವೀರ್ ಅವರು ತಕ್ಷಣ ಕನ್ನಡಿಗರ ಬಳಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಈ ವಿವಾದದ ಬಗ್ಗೆ ರಣವೀರ್ ಸಿಂಗ್ ಪ್ರತಿಕ್ರಿಯಿಸುತ್ತಾರೋ? ಇಲ್ಲವೋ? ಕಾದು ನೋಡಬೇಕಾಗಿದೆ. ನಟ ರಿಷಬ್ ಶೆಟ್ಟಿ ಕೂಡ ಐಎಫ್ಎಫ್ಐ ಉತ್ಸವದಲ್ಲಿ ಭಾಗಿಯಾಗಿದ್ದರು. ಈ ವಿಷಯದ ಬಗ್ಗೆ ರಿಷಬ್ ಅವರ ಪ್ರತಿಕ್ರಿಯೆ ಏನೆಂದು ಕಾದು ನೋಡಬೇಕಾಗಿದೆ.
ಅಂದಹಾಗೆ, ಕನ್ನಡ ಚಲನಚಿತ್ರೋದ್ಯಮದಲ್ಲಿ ನಿರ್ದೇಶಕರಾಗಿ ಹಾಗೂ ನಟನಾಗಿ ರಿಷಬ್ ಉತ್ತಮ ಯಶಸ್ಸನ್ನು ಗಳಿಸಿದ್ದಾರೆ. ಕಾಂತಾರ ಚಿತ್ರದ ಮೂಲಕ ರಿಷಬ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಾಂತಾರ ಅಧ್ಯಾಯ 1 ಚಿತ್ರ 800 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದೆ. ಕಾಂತಾರ ಯೂನಿವರ್ಸ್ನಿಂದ ಇನ್ನಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

















