ಮುಂಬೈ: ಸೋದರ ಮಾವನೇ ಬಾಲಕಿಯನ್ನು ಅಪಹರಿಸಿ ₹ 90 ಸಾವಿರಕ್ಕೆ ಮಾರಾಟ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಮುಂಬೈ ಪೊಲೀಸರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ಈ ಘಟನೆಯಲ್ಲಿ ಅಪಹರಣಕ್ಕೆ ಒಳಗಾಗಿ ಮಾರಾಟವಾಗಿದ್ದ ಬಾಲಕಿ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದಾಳೆ.
ವಕೋಲಾ ಪ್ರದೇಶದಿಂದ ಬಾಲಕಿಯ ಸೋದರ ಮಾವ ಹಾಗೂ ಇತರ ಐವರು ಗುರುವಾರ ಮಧ್ಯರಾತ್ರಿ ಅಪಹರಿಸಿದ್ದರು. ನಂತರ * 90 ಸಾವಿರಕ್ಕೆ ಮಾರಾಟ ಮಾಡಿದ್ದರು. ನಂತರ ಆಕೆಯನ್ನು ಖರೀದಿಸಿದ್ದ ವ್ಯಕ್ತಿ ₹1,80,000ಕ್ಕೆ ಮರು ಮಾರಟ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಾಯಿ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಬಾಲಕಿ ಪನ್ವೆಲ್ನಲ್ಲಿ ಇರುವುದು ತಿಳಿದುಬಂತು. ನಂತರ ಸುರಕ್ಷಿತವಾಗಿ ಬಾಲಕಿ ರಕ್ಷಿಸಿ ಅವರ ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


















