ಉಡುಪಿ: ಮಂಗಳೂರು ವಿವಿ ಮತ್ತು ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವರ ಸಹಯೋಗದಲ್ಲಿ ನಡೆದ 45ನೇ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.
ಜಿಲ್ಲೆಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ 472 ಅಂಕಗಳನ್ನು ಪಡೆದು ಸಮಗ್ರ ಚಾಂಪಿಯನ್ಶಿಪ್ ಅನ್ನು ತಮ್ಮದಾಗಿಸಿ ಕೊಂಡಿತು. ಎಸ್.ಡಿ.ಎಮ್ ಕಾಲೇಜು ಉಜಿರೆ ದ್ವಿತೀಯ ಸ್ಥಾನ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನೆಡಿಯೂರು ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಬೆಸ್ಟ್ ಅಥ್ಲೇಟಿಕ್ ಆಗಿ ಮಹಿಳಾ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ದೀಕ್ಷಿತಾ ರಾಮಕೃಷ್ಣ ಗೌಡ ಮತ್ತು ಪುರುಷರ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನೆಡಿಯೂರಿನ ಧನುಷ್ ಕುಡ್ತಾನ್ ಆಯ್ಕೆಯಾದರು.

ಚಕ್ರ ಎಸೆತ, ಗುಂಡು ಎಸೆತ, ಹರ್ಡಲ್ಸ್, ಹ್ಯಾಮರ್ ಎಸೆತ, 10000 ಮೀ ಓಟ ಮತ್ತು 4X400 ರಿಲೆಯಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಳುಗಳೇ ನಿರ್ಮಿಸಿದ್ದ ವಿ ವಿ ಮಟ್ಟದ ದಾಖಲೆಯನ್ನು ಮುರಿದು ಆಳ್ವಾಸ್ ಕಾಲೇಜಿನ ಕ್ರೀಡಾಳುಗಳೇ ಹೊಸ ದಾಖಲೆಯನ್ನು ನಿರ್ಮಿಸಿದರು. ಮಹಿಳಾ ವಿಭಾಗದ ಚಾಂಪಿಯನ್ಶಿಪ್ನಲ್ಲಿ ಡಾ. ಜಿ ಶಂಕರ್ ಸರಕಾರಿ ಮಹಿಳಾ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಆಳ್ವಾಸ್ ಕಾಲೇಜು ಟ್ರಸ್ಟ್ ನ ಅಧ್ಯಕ್ಷರಾದ ವಿವೇಕ್ ಆಳ್ವ, ಕಾರ್ತಿಕ್ ಎಸ್ಟೇಟ್ನ ಮಾಲಕರು ಹರಿಯಪ್ಪ ಕೋಟ್ಯಾನ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನೆರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಡಾ ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಪ್ರೊ. ಸೋಜನ್ ಕೆ.ಜಿ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು ಕೃಷ್ಣ ಭಟ್, ಐಕ್ಯೂಎಸಿ ಸಂಚಾಲಕರು ಪ್ರೊ. ಶ್ರೀಮತಿ ಅಡಿಗ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಂದ್ರ ಕೆ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು.


















