ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಪೂರ್ವಭಾವಿ ಗ್ರಾಮ ಸಭೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಂಬಳಮನೆ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಉಮಾಮಹೇಶ್ವರ ಸಭಾಭವನದಲ್ಲಿ ನಡೆಯಿತು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗಾಗಿ ಮುಜರಾಯಿ ಇಲಾಖೆಯಿಂದ 25 ಲಕ್ಷ ರೂ. ಅನುದಾನ ಮಂಜೂರು ಮಾಡಲು ಪ್ರಯತ್ನಿಸಲಾಗುವುದು. ಹಾಗೆಯೇ ದೇವಸ್ಥಾನದ ದ್ವಾರದ ಬಾಗಿಲು, ಮೇಲ್ಛಾವಣಿ ಸಹಿತ ಇತರೆ ಕಾಮಗಾರಿಗಳಿಗೆ ಬೇಕಾಗುವ ಮರಗಳನ್ನು ಅರಣ್ಯ ಇಲಾಖೆಯ ಮೂಲಕ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಜೀರ್ಣೋದ್ಧಾರ ಕಾರ್ಯಕ್ರಮವನ್ನು ಗ್ರಾಮಸ್ಥರು ಒಟ್ಟಾಗಿ ಮಾಡಬೇಕು. ಊರಿನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ಸಂದರ್ಭದಲ್ಲಿ ಆ ಊರಿನ ಶಕ್ತಿ ಏನೆಂಬುವುದು ತಿಳಿಯುತ್ತದೆ. ಗ್ರಾಮಸ್ಥರು ಒಗ್ಗೂಡಿದರೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ನಡೆಸುವುದು ಕಷ್ಟದ ಕೆಲಸವಲ್ಲ ಎಂದು ಹೇಳಿದರು.
ಮಾಜಿ ಆಡಳಿತ ಮೂಕ್ತೇಸರ ಡಾ. ಸಿ.ಜಿ. ಬಲ್ಲಾಳ್, ಗ್ರಾಮದ ಮುಖಂಡರಾದ ಗೋಪಾಲಕೃಷ್ಣ ರಾವ್, ಡಾ. ಪಿ.ಜಿ. ರಾವ್, ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಅನಂತ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ರಾವ್, ಸದಸ್ಯರಾದ ಶೇಖರ್ ಸುವರ್ಣ, ಪಾಡುರಂಗ ನಾಯಕ್, ಉಮೇಶ್ ಮಾರ್ಪಳ್ಳಿ, ಶಂಕರ್ ಆಚಾರ್ಯ, ಚಂದ್ರಾವತಿ ಮೊದಲಾದವರು ಉಪಸ್ಥಿತರಿದ್ದರು.

















