ಉಡುಪಿ: ಪ್ರಧಾನಿ ಭೇಟಿ ಹಿನ್ನೆಲೆ, ದುರಸ್ಥಿ ಕಾರ್ಯ ತಾತ್ಕಾಲಿಕ ಸ್ಥಗಿತ.

ಉಡುಪಿ, ನ.25: ಸನ್ಮಾನ್ಯ ಭಾರತದ ಪ್ರಧಾನ ಮಂತ್ರಿಯವರು ನವೆಂಬರ್ 28 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವ ಸಂದರ್ಭದಲ್ಲಿ ನಿಯಮಾನುಸಾರ ಶಿಷ್ಟಾಚಾರವನ್ನು ಪಾಲಿಸಬೇಕಾಗಿರುವ ಹಿನ್ನೆಲೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023 ಸೆಕ್ಷನ್ 163 ರನ್ವಯ ಈ ಕೆಳಗಿನಂತೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿರುತ್ತಾರೆ.
ಉಡುಪಿ ನಗರ ವ್ಯಾಪ್ತಿಯೊಳಗಿನ ಎನ್.ಹೆಚ್-66 ಮತ್ತು ಸಂಪರ್ಕ ರಸ್ತೆಗಳ ಮೇಲೆ ನಡೆಯುತ್ತಿರುವ ಎಲ್ಲಾ ಭೂಮಿ ಅಗೆಯುವ, ಕೊರೆಯುವ, ತೋಡುವ ಹಾಗೂ ಗುಂಡಿ ತೋಡುವ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು. ಈ ನಿರ್ಬಂಧ ಆದೇಶವು ನ. 28 ರ ಸಂಜೆ 5 ರ ವರೆಗೆ ಜಾರಿಯಲ್ಲಿರುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸಬೇಕಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಆದೇಶವನ್ನು ಎನ್.ಹೆಚ್ ವಿಭಾಗೀಯ ಅಧಿಕಾರಿಗಳು, ಪಿಡಬ್ಲ್ಯೂಡಿ, ಪಿ.ಆರ್.ಇ.ಡಿ, ನಗರಸಭೆ, ಬಿ.ಎಸ್.ಎನ್.ಎಲ್ ಅಧಿಕಾರಿಗಳು ಮತ್ತು ಇತರ ಸಂಬoಧಿತ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.