ಉಡುಪಿ : ಕ್ರೀಡೆಯು ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಜಯ ಗಳಿಸುವುದೆ ಮುಖ್ಯವಲ್ಲ ಭಾಗವಹಿಸುವಿಕೆಯು ಮುಖ್ಯವಾಗಿದೆ. ಆಸಕ್ತಿ, ಕಠಿನ ಪರಿಶ್ರಮ ಮತ್ತು ಆತ್ಮವಿಶ್ವಾಸಗಳು ಕ್ರೀಡಾಳುಗಳಲ್ಲಿದ್ದರೆ ಮಾತ್ರ ಕ್ರೀಡೆಯಲ್ಲಿ ಹಾಗೂ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಪ್ರೋ ವೈಸ್ ಚಾನ್ಸಲರ್ ಡಾ. ಎಚ್ ಎಸ್ ಬಲ್ಲಾಳ್ ಹೇಳಿದರು.
ಇವರು ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವುಗಳ ಆಶ್ರಯದಲ್ಲಿ ಜಿಲ್ಲಾ ಮಹಾತ್ಮ ಗಾಂಧೀಜಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲೆಯ ಶಾಸಕರಾದ ಶ್ರೀ ಯಶ್‌ಪಾಲ್ ಎ ಸುವರ್ಣ ಮಾತನಾಡಿ ವಿಶೇಷ ಚೇತನ ಮಕ್ಕಳ, ವಿಶೇಷ ಸಾಮರ್ಥ್ಯವನ್ನು ಹೊರ ತರಲು ಇಂತಹ ಕಾರ್ಯಕ್ರಗಳ ಅಗತ್ಯತೆ ಇದೆ. ಸರಕಾರಿ ಕಾಲೇಜು ಇಂತಹ ಒಂದು ಅವಕಾಶವನ್ನು ವಿಶೇಷ ಚೇತನ ಮಕ್ಕಳಿಗೆ ಒದಗಿಸಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿಶೇಷ ಚೇತನ ಮಕ್ಕಳ ಉಸ್ತುವಾರಿ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಯಿತು. ಉಡುಪಿ ಜಿಲ್ಲೆಯಿಂದ ಸುಮಾರು 500 ಮಂದಿ ವಿಶೇಷ ಚೇತನ ಮಕ್ಕಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಕರ್ನಾಟಕ ರಾಜ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅವರ ವತಿಯಿಂದ ಭಾಗವಹಿಸಿದ ಎಲ್ಲಾ ಕ್ರೀಡಾಳುಗಳಿಗೂ ಮತ್ತು ತರಬೇತುದಾರರಿಗೆ ಟಿ ಶರ್ಟ್ ಮತ್ತು ಕ್ಯಾಪ್‌ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅದ್ಯಕ್ಷರು ಬಸ್ರೂರು ರಾಜೀವ ಶೆಟ್ಟಿ, ಭಾರತೀಯ ವಿಶೇಷ ಚೇತನಾ ಫೆಡರೇಶನ್‌ನ ಕಾರ್ಯದರ್ಶಿ ಎಂ ಆರ್ ಮಹೇಶ್ ಗೌಡ, ಎಲ್.ಐ.ಸಿ ಸೀನಿಯರ್ ಡಿವಿಜನಲ್ ಮ್ಯನೇಜರ್ ಗಣಪತಿ ಎನ್ ಭಟ್, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆಯ ಅಧ್ಯಕ್ಷರು ಡಾ. ಗಣನಾಥ ಎಕ್ಕಾರು ಮತ್ತು ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರು ಪ್ರೊ. ಸೋಜನ್ ಕೆ ಜಿ ಅತಿಥಿಗಳನ್ನು ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ರಾಜೇಂದ್ರ ಕೆ ನಿರೂಪಿಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ ಪಾಟ್ಕರ್ ವಂದಿಸಿದರು.


















